Saturday 6 August, 2011

ಅತ್ತಿಮಬ್ಬೆ

ಕ್ರಿ. ಶ.೧೦ನೇ ಶತಮಾನದಲ್ಲಿ ಸಮಾಜಕ್ಕೆ ಕಳಶಪ್ರಾಯವಾಗಿ ಬದುಕಿದ್ದಮಹಿಳೆ. ಅತ್ತಿಮಬ್ಬೆ ವೆಂಗಿನಾಡಿನ ಕಮ್ಮದೇಶದ ಪುಂಗನೂರಿನ ಮಲ್ಲಪಯ್ಯನ ಮಗಳು. ಮಲ್ಲಪಯ್ಯನ ತಮ್ಮ ಪೊನಮಯ್ಯ. ಇವರಿಬ್ಬರೂ ಪೊನ್ನನಿಂದ ಶಾಂತಿ ಪುರಾಣವನ್ನು ಬರೆಯಿಸಿದರು. ಚಾಲುಕ್ಯ ವಂಶದ ತೈಲಪಚಕ್ರವರ್ತಿಯ ಆಪ್ತಮಂತ್ರಿ ದಲ್ಲಪ. ಆತನ ಮಗ ನಾಗಮಯ್ಯ, ತಂದೆಯ ಮಂತ್ರಿಮಂಡಲದಲ್ಲಿಯೇ ಸೇನಾನಾಯಕನಾಗಿದ್ದ. ಅತ್ತಿಮಬ್ಬೆ ಮತ್ತು ಆಕೆಯ ತಂಗಿ ಗುಂಡಮಬ್ಬೆಯನ್ನು ನಾಗದೇವನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.

ಅತ್ತಿಮಬ್ಬೆ ನಾಗಮಯ್ಯರ ಮಗ ಅಣ್ಣಿಗದೇವ.ವೀರ ನಾಗಮಯ್ಯ ರಣರಂಗದಲ್ಲಿ ಮೃತನಾಗುತ್ತಾನೆ.ಪತಿಯೊಂದಿಗೆ ಅತ್ತಿಮಬ್ಬೆ ಸಹಗಮನಕ್ಕಾಗಿ ಸಿದ್ಧಳಾದಾಗ, ಎಳೆಯ ಪ್ರಾಯದ ಅಣ್ಣಿಗದೇವನನ್ನು ಸಾಕಿ ಸಲಹುವ ಜವಾಬ್ಡಾರಿಯನ್ನು ಗುಂಡುಮಬ್ಬೆಯು ತನ್ನ ಅಕ್ಕನಿಗೆ ವಹಿಸಿ ತಾನು ಸತಿ ಹೋಗುತ್ತಾಳೆ. ಒಬ್ಬೊಂಟಿಗಳಾದ ಅತ್ತಿಮಬ್ಬೆ ಸುತನ ಜವಾಬ್ದಾರಿಯೊಂದಿಗೆ ಪತಿಯ ಕೆಲಸದ ಜವಾಬ್ದಾರಿಯನ್ನೂ ಸಹ ಹೊತ್ತು ರಾಜಕಾರಣದಲ್ಲಿ ತೈಲಪಚಕ್ರವರ್ತಿಗೂ ತಾಯಿಯಂತೆ ಸಲಹೆ ನೀಡುತ್ತಿದ್ದಳು.

ಕೊಡುಗೈ ದಾನಿಯಾಗಿ ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ದಾನಮಾಡಿದಳು. ಆಕೆಯಿದ್ದ ಸಂವತ್ಸರಕ್ಕೆ ೧೫೦೦ ವರ್ಷಗಳ ಹಿಂದೆ ಮಹಾವೀರನ ನಿರ್ವಾಣವಾಗಿದ್ದುದರಿಂದ, ಮಹಾವೀರನ ೧೫೦೦ ಮಣಿಖಚಿತ ಸುವರ್ಣ ಬಿಂಬಗಳನ್ನು ಮಾಡಿಸಿ ಅದನ್ನು ದಾನ ಮಾಡಿದ್ದಾಳೆ. ೧೫೦೦ ಸುವರ್ಣ ಜಯಘಂಟೆಗಳನ್ನೂ, ಸುವರ್ಣ ತೋರಣಗಳನ್ನೂ, ಮರದ ಮಂದಾಸನಗಳನ್ನೂ ಮಾಡಿಸಿ ದಾನ ಮಾಡಿದ್ದಾಳೆ. ಆಕೆ ೧೫೦೦ ಬಸದಿಗಳ ನಿರ್ಮಾಣವನ್ನು ಮಾಡಿಸಿದ್ದಾಗಿಯೂ ಆ ಬಸದಿಗಳಿಗೆಲ್ಲಾ ಮಿಗಿಲಾದದ್ದು ಈ ಬ್ರಹ್ಮಜಿನಾಲಯ ಎಂದು ಲಕ್ಕುಂಡಿಯ ಬ್ರಹ್ಮಜಿನಾಲಯದ ಶಾಸನ ಸಾರಿ ಹೇಳುತ್ತಿದೆ. ಕವಿಚಕ್ರವರ್ತಿಯಾದ ರನ್ನನಿಗೆ ಆಶ್ರಯದಾತಳಾಗಿದ್ದು, ಆತನಿಂದ ಅಜಿತನಾಥ ಪುರಾಣದ ರಚನೆಗೆ ಕಾರಣಳಾದಳು. ರನ್ನನನ್ನು ತೈಲಪನ ಆಸ್ಥಾನಕ್ಕೆ ಸೇರಿಸಿದ ಕೀರ್ತಿ ಅತ್ತಿಮಬ್ಬೆಯದು. ಪೊನ್ನನ ಶಾಂತಿಪುರಾಣದ ೧೦೦೦ ಪ್ರತಿಗಳನ್ನು ಮಾಡಿಸಿ ಸಾಹಿತ್ಯ ನಿರ್ಮಾಣ ಹಾಗೂ ಅದರ ಪೋಷಣೆಗೆ ಕಾರಣಳಾಗಿದ್ದಾಳೆ.

ಧಾರ್ಮಿಕ, ಸಾಹಿತ್ಯಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅತ್ತಿಮಬ್ಬೆಯಿಂದ ಸಂದ ಸೇವೆ ಅಪಾರವಾದದ್ದಾಗಿದೆ. ಪುರುಷ ಪ್ರಧಾನ ಸಮಾಜವಾಗಿದ್ದ ಕ್ರಿ. ಶ. ೧೦ನೆಯ ಶತಮಾನದಲ್ಲಿ ಒಬ್ಬೊಂಟಿ, ವಿಧವೆ ಹೆಣ್ಣು ಇಷ್ಟೊಂದು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ರುವುದು ಮಹತ್ವಪೂರ್ಣದ್ದಾಗಿದೆ.

ಉಲ್ಲೇಖಗಳು:
ಅಜಿತನಾಥ ಪುರಾಣ, ಶಾಂತಿ ಪುರಾಣ, ಸಮಯ ಪರೀಕ್ಷೆ, ಲಕ್ಕುಂಡಿಯ ಶಾಸನಗಳು, ಸಮಾಲೋಕನದಲ್ಲಿನ ತಿ.ನಂ.ಶ್ರಿ ಅವರ ಲೇಖನ
ಅತ್ತಿಮಬ್ಬೆಯ ಕಲ್ಪಿತ ಚಿತ್ರ

ಅತ್ತಿಮಬ್ಬೆಯ ಬಿರುದುಗಳು : ಕವಿವರ ಕಾಮಧೇನು, ಗುಣದಂಕಕಾರ್ತಿ, ಜಿನಶಾಸನದೀಪಿಕೆ, ದಾನಚಿಂತಾಮಣಿ, ಗುಣದಖಣಿ, ಜೈನ ಶಾಸನ ರಕ್ಷಾಮಣಿ, ಅಕಲಂಕಚರಿತೆ, ಸಜ್ಜನೈಕ ಚೂಡಾಮಣಿ, ಸರ್ವಕಳಾವಿದೆ ಮುಂತಾದುವು.

೧೯೯೪ ನೇ ಇಸವಿಗೆ ಆಕೆ ಇದ್ದು ಒಂದು ಸಹಸ್ರ ವರ್ಷಗಳಾಗಿದ್ದುದರಿಂದ ೧೯೯೪ನೇ ವರ್ಷವನ್ನು ಕರ್ನಾಟಕ ಸರ್ಕಾರ ಅತ್ತಿಮಬ್ಬೆ ವರ್ಷವೆಂದು ಘೋಷಿಸಿತ್ತು. ಅತಂದಿನಿಂದ ಆಕೆಯ ಸ್ಮರಣಾರ್ಥ ಅತ್ತಿಮಬ್ಬೆ ಪ್ರಶಸ್ತಿಯನ್ನೂ ಸಹ ಪ್ರತಿಷ್ಠಾಪಿಸಿದೆ.

No comments:

Post a Comment