Wednesday 31 August, 2011

ಓದು ಎಂಬ ತಪಸ್ಸು

ಹದಿನೈದು- ಇಪ್ಪತ್ತು ವರ್ಷಗಳ ಕಾಲ ಪುಸ್ತಕವನ್ನು ಹಿಡಿದುಕೊಂಡು ಓದಿದ ವ್ಯಕ್ತಿಗಳು ಸಹ “ಓದುವುದರಿಂದೇನು ಪ್ರಯೋಜನ? ಪುಸ್ತಕ ಓದದೆ ಬದುಕಲಿಕ್ಕಾಗದೆ?” ಎಂದು ಕೇಳುವುದು ವಿಚಿತ್ರವೆನಿಸುತ್ತದೆ. ನಿಜ, ಪುಸ್ತಕ ಓದುವುದು ಮಾನವ ಪ್ರಾಣಿಯೊಂದೇ. ಆದರೆ, ಪುಸ್ತಕವಿಲ್ಲದಿದ್ದರೆ ಶಿಕ್ಷಕ, ಶಾಲೆ- ಕಾಲೇಜು- ಯೂನಿವರ್ಸಿಟಿ ಇತ್ಯಾದಿ ಯಾವುದೂ ಇರುವುದಿಲ್ಲ ಎಂದು ಒಬ್ಬ ಓದಿದ ವ್ಯಕ್ತಿ ಅರ್ಥ ಮಾಡಿಕೊಳ್ಳುವುದಿಲ್ಲ ಎಂದಾದರೆ, ಶಾಲೆ- ಕಾಲೇಜು ಓದಿನಲ್ಲಿಯೂ `ದಂಡದ ಓದು’ ಎಂಬುದಿದೆ ಎಂದು ಭಾವಿಸಬೇಕಾಗುತ್ತದೆ.

ಶತಮಾನಗಳಿಂದ ಜ್ಞಾನವೆಂಬುದು ಪ್ರವಹಿಸುತ್ತಾ ಬಂದಿರುವುದು ಮುಖ್ಯವಾಗಿ ಲಿಖಿತ ಅಕ್ಷರಗಳ ಮೂಲಕ. ಯಾವುದಾದರೊಂದು ಕೋರ್ಸು ಒಂದು ಸರ್ಟಿಫಿಕೇಟಿನಲ್ಲಿ ಕೊನೆಗೊಳ್ಳುತ್ತದೆ. ಆದರೆ, ಅದು ಪುಸ್ತಕದ ಕೊನೆಯಲ್ಲ, ಬದುಕು ಎಂಬ ಪುಸ್ತಕದ ಕೊನೆಯೂ ಅಲ್ಲ. “ನಾವು ಯಾಕೆ ಯೋಚಿಸಬೇಕು? ಯೋಚಿಸುವುದರಿಂದ ಏನು ಪ್ರಯೋಜನ?” ಎಂದು ಯಾರಾದರೂ ಕೇಳಿದರೆ, ಆ ಪ್ರಶ್ನೆಗೆ ಉತ್ತರವಿಲ್ಲ.

ಅದಕ್ಕೆ ಉತ್ತರಿಸಲು ಪ್ರಯತ್ನಿಸಬೇಕಾದ ಅಗತ್ಯವೂ ಇಲ್ಲ. ಅಂಥ ಪ್ರಶ್ನೆಗಳಿಗೆ ವ್ಯಕ್ತಿಗೆ ಹೊರಗಿಂದ ಉತ್ತರ ಸಿಗುವುದಿಲ್ಲ. ಆತನ ಒಳಗೇ ಸಿಗಬೇಕು. ಒಂದು ಸರ್ಟಿಫಿಕೇಟಿನ ಆಧಾರದಲ್ಲಿ ಒಂದು ಪ್ರತಿಷ್ಠಿತವಾದ ಮತ್ತು ಹಲವಂಕೆ ಸಂಬಳದ ಉದ್ಯೋಗವನ್ನು ಪಡೆದುಕೊಂಡಿರುವ ವ್ಯಕ್ತಿ ಈ ಪ್ರಶ್ನೆಯನ್ನು ಕೇಳುವುದಾದರೆ, ಆತ ಉತ್ತರಕ್ಕಾಗಿ ಆ ಪ್ರಶ್ನೆಯನ್ನು ಕೇಳಿರುವುದಿಲ್ಲ? ಎನ್ನುವುದು ಸ್ಪಷ್ಟ. ಏಕೆಂದರೆ, ಉತ್ತರ ಆತನ ಒಳಗೇ ಇದೆ.

ಪುಸ್ತಕಗಳು ಶತಮಾನಗಳ ಚಿಂತನೆ- ವಿಚಾರ- ಅವಲೋಕನದ ದಾಖಲೆಗಳು. ಅದರಲ್ಲಿ ಶ್ರೇಷ್ಠರದ್ದಷ್ಟೇ ಅಲ್ಲ ಸಾಮಾನ್ಯರದ್ದೂ ಇದೆ. ಉಚ್ಚ ಕುಲಜರದ್ದು ಮಾತ್ರ ಅಲ್ಲ, ಉಚ್ಚ ಕುಲಜರಲ್ಲದವರದ್ದೂ ಇದೆ. ನಿಜವಾದ `ಟ್ರಡಿಷನ್’ ಎಂದರೆ ಅದು; ಮೂಢನಂಬಿಕೆಗಳು, ಕಂದಾಚಾರಗಳು ಅಲ್ಲ. ಶ್ರೇಷ್ಠತೆಯಿರುವುದು ಚಿಂತನೆ ಮತ್ತು ಅದರ ಕ್ರಿಯಾರೂಪದಲ್ಲಿ. ಕೆಲವರು ತಮ್ಮ ಇಡೀ ಬದುಕನ್ನೇ ಅದಕ್ಕಾಗಿ ವ್ಯಯಿಸಿದ್ದಿದೆ. ನಮ್ಮ ಇಂದಿನ ಬದುಕು ಚೆನ್ನಾಗಿದ್ದರೆ, ಅದಕ್ಕೆ ಕಾರಣ ಈ ಪರಂಪರೆ. ಈ ಅಮೂಲ್ಯ ಪರಂಪರೆಯನ್ನು ತನ್ನಿಂದ ಬೇರ್ಪಡಿಸಿಕೊಂಡ ಶಿಕ್ಷಣ ಶಿಕ್ಷಣವಲ್ಲ.

ಮಗುವನ್ನು ಯೋಚಿಸಿ ಮಾತಾಡುವ, ಯೋಚಿಸಿ ಬರೆಯುವ ಸುಶಿಕ್ಷಿತನನ್ನಾಗಿಸಬೇಕು. ಬದುಕಿನ ಎಲ್ಲಾ ಸಂದರ್ಭದಲ್ಲಿಯೂ ಯೋಚಿಸಿ ಮುಂದಡಿಯಿಡುವ ವ್ಯಕ್ತಿಯನ್ನಾಗಿ ರೂಪಿಸಬೇಕು. ಅದಕ್ಕೆ ವಿವಿಧ ಅಗತ್ಯವಿರುವ ವಿಧಾನಗಳನ್ನು ತಾಯಿ- ತಂದೆ, ಶಿಕ್ಷಕ ಮತ್ತು ಸ್ವತಃ ಮಗುವೇ ಅನುಸರಿಬೇಕಾಗುತ್ತದೆ. ಜ್ಞಾನಕ್ಕೆ ಅನುಭವ ಅಗತ್ಯ. ಆದರೆ ಅನುಭವದ ಜೊತೆಗೆ ಚಿಂತನೆ ಮತ್ತು ಓದು ಕೂಡ ಅಗತ್ಯ. ವರ್ಷಗಳ ಅನುಭವದಿಂದ ದೊರಕದ್ದನ್ನು ಕೂಡ ಪುಸ್ತಕ ಕೆಲವು ನಿಮಿಷಗಳಲ್ಲಿ ಒದಗಿಸುತ್ತದೆ.

ಪ್ರಶ್ನಿಸಲು, ಪ್ರಶ್ನಿಸಿ ಕಂಡುಕೊಳ್ಳಲು ಪ್ರತಿಯೊಂದು ಮಗುವಿಗೂ ಸಾಧ್ಯ. ಅದು ಕೇವಲ ಪ್ರತಿಭಾವಂತ ಮಗು ಮಾಡುವಂಥದು ಎಂದೇನಿಲ್ಲ. ಪ್ರಶ್ನಿಸುವ ಅವಕಾಶವಿಲ್ಲದೆ ಮಗುವನ್ನು ಬೆಳೆಸುವವರಿದ್ದಾರೆ. ಏಕೆಂದರೆ, ಅಂಥ ಮಕ್ಕಳ ಉದ್ಯೋಗ ಅಥವಾ ವೃತ್ತಿ, ಮಾತ್ರವಲ್ಲ, ಬದುಕು ಸಹ ಏನು ಎನ್ನುವುದು ಅವರು ಹುಟ್ಟುವ ಮೊದಲೇ ನಿರ್ಧಾರವಾಗಿರುತ್ತದೆ. ಅನೇಕ ಶ್ರೀಮಂತರ ಮಕ್ಕಳು ಅಂಥವರು. ಪುಸ್ತಕಗಳು ಅಥವಾ ಚಿಂತನೆ ಅವರಿಗೆ ಅಗತ್ಯವಿರುವಂಥದಲ್ಲ ಎಂಬ ತಪ್ಪು ಮನೋಭಾವ ಕೂಡ ಸಮಾಜದಲ್ಲಿ ಇದೆ. ಆ ಮನೋಭಾವವನ್ನು ಇರಿಸಿಕೊಂಡು ‘ಸುಮ್ಮನೆ’ ಶಾಲೆ- ಕಾಲೇಜಿಗೆ ಹೋಗುವವರು ಕೂಡ ಇದ್ದಾರೆ. ಇಂದಿನ ದಿನಗಳಲ್ಲಿ ‘ಸಾಮಾಜಿಕ ಮನಸ್ಸ’ನ್ನೇ ತಮ್ಮ ಮನಸ್ಸಾಗಿಸಿಕೊಂಡ ವ್ಯಕ್ತಿಗಳ ಸಂಖ್ಯೆ ಬಹಳ ದೊಡ್ಡದಿದೆ. ಕಾರಣ, ಒಬ್ಬನ ವೈಭವೋಪೇತ ಬದುಕೇ ಇನ್ನೊಬ್ಬನಿಗೆ ಮಾದರಿಯಾಗಿದೆ. ತನ್ನ ಸ್ವಂತ ಬದುಕನ್ನು ರೂಪಿಸಿಕೊಳ್ಳಲು ಸಮಾಜವೂ ಬಿಡುತ್ತಿಲ್ಲ, ಶಿಕ್ಷಣವೂ ಬಿಡುತ್ತಿಲ್ಲ!

ನಿಮ್ಮ ಪುಟ್ಟ ಮಗು ಪ್ರತಿಭಾವಂತ ಅಥವಾ ಜೀನಿಯಸ್ ಎಂದು ನಿಮಗನಿಸಿದರೆ, ತಪ್ಪೇನಿಲ್ಲ. ಆದರೆ, ಇತರರಲ್ಲಿ ಹಾಗೆ ಹೇಳಿಕೊಳ್ಳಬಾರದು ಅಷ್ಟೆ. ಜೀನಿಯಸ್ ಗಳ ಜೀವನ ಚರಿತ್ರೆಯನ್ನು ಓದಿದರೆ, ತಮ್ಮ ಮಗುವಿನ ಬಗ್ಗೆ ತಾಯಿ- ತಂದೆ ಇಂಥ ಕಲ್ಪನೆಗಳನ್ನು ಏಕೆ ಇಟ್ಟುಕೊಳ್ಳಬಾರದು ಎಂದು ತಿಳಿಯುತ್ತದೆ. ಮೂರು ವರ್ಷದ ತನ್ನ ಮಗುವನ್ನು ಜೀನಿಯಸ್ ಎಂದು ಭ್ರಮಿಸಿಕೊಂಡು ಅದಕ್ಕೆ ವಿಶೇಷ ರೀತಿಯ ಶಿಕ್ಷಣ ಕೊಡಬಯಸಿದರೆ ಆ ಮಗುವಿನ ಮಿದುಳಿಗೇ ತೊಂದರೆಯಾದೀತು! ದೊಡ್ಡವರಿಗೆ ಅರ್ಥವಾಗದ, ದೊಡ್ಡವರಿಂದ ಉತ್ತರಿಸಲಾಗದ ಪ್ರಶ್ನೆಗಳನ್ನು ಮಕ್ಕಳು ಕೇಳುತ್ತವಲ್ಲ ಎಂದು ಬೆರಗಾಗುವವರು ತಮ್ಮ ಮಕ್ಕಳಿಗೋಸ್ಕರವಾದರೂ ಸ್ವಲ್ಪ ಮಕ್ಕಳ ಮನೋವಿಜ್ಞಾನವನ್ನು ಕಲಿಯುವುದೊಳ್ಳೆಯದು. ಅದೇ ರೀತಿ, ಮಗು ಮಾತು ಆರಂಭಿಸಲು ತಡ ಮಾಡಿತು, ಮಗು ಸ್ಮಾರ್ಟ್ ಆಗಿಲ್ಲ ಎಂದು ಮುಂತಾಗಿ ಚಿಂತಿಸುವವರು ಕೂಡ ಮಕ್ಕಳ ಮನೋವಿಜ್ಞಾನದ ಜೊತೆಗೆ ಜೀನಿಯಸ್ ಗಳ ಜೀವನ ಚರಿತ್ರೆಯನ್ನು ಕೂಡ ಓದಬೇಕು.

ಒಂದು ವಿಷಯದಲ್ಲಿ ಆಸಕ್ತಿ ಎನ್ನುವುದು ಅದನ್ನು ಅಧ್ಯಯನ ಮಾಡಲು ಕಲಿಯಲು ತೊಡಗಿದ ಬಳಿಕ ಹುಟ್ಟುತ್ತದೆ; ಅಧ್ಯಯನವನ್ನು ಆರಂಭಿಸುವ ಮೊದಲಲ್ಲ. ವಿಜ್ಞಾನ ವಿಷಯಗಳಾಗಿರಲಿ, ಕಲಾ ವಿಷಯಗಳಾಗಿರಲಿ, ಸಂಗೀತ, ಚಿತ್ರಕಲೆ, ಕ್ರೀಡೆ ಇತ್ಯಾದಿ ಎಲ್ಲದರ ವಿಷಯದಲ್ಲಿಯೂ ಹೀಗೆ; ತಿನ್ನಲಾರಂಭಿಸದ ಮೇಲೆ ರುಚಿ. ಹಾಗಲಕಾಯಿ ಸಹ ಇಷ್ಟವಾಗುವುದು ಹೀಗೆ. ಬಹುತೇಕ ಎಲ್ಲ ಲೇಖಕರ, ವಿಜ್ಞಾನಿಗಳ, ಸಮಾಜ ಸುಧಾರಕರ, ರಾಜಕಾರಣಿಗಳ, ಕಲಾವಿದರ, ಕ್ರೀಡಾಪಟುಗಳ ಬದುಕಿನಲ್ಲಿ ನಡೆದುದು ಇದೇ.

ಮಕ್ಕಳು ರೊನಾಲ್ಡ್ ರೊಸ್, ಗ್ರೆಗರ್ ಮೆಂಡೆಲ್, ಲೂಯಿ ಪ್ಯಾಸ್ಚರ್, ಅಲ್ಬರ್ಟ್ ಐನ್ಸ್ಟೀನ್, ಚಾರ್ಲ್ಸ್ ಡಿಕಿನ್ಸ್, ವಿನ್ಸ್ಟನ್ ಚರ್ಚಿಲ್, ಮಾರ್ಕ್ ಟ್ವೆಯಿನ್, ಮಹಾತ್ಮಾ ಗಾಂಧಿ, ರವೀಂದ್ರನಾಥ್ ಟಾಗೋರ್, ಮೇರಿ ಕ್ಯೂರಿ, ರಸ್ಕಿನ್ ಬಾಂಡ್, ಚರಕ, ವಾಗ್ಭಟ, ಚಾರ್ಲಿ ಚಾಪ್ಲಿನ್ ಮುಂತಾಗಿ ನೂರಾರು ವ್ಯಕ್ತಿಗಳ ಕುರಿತಾಗಿ ಓದಬೇಕು. ಪ್ರತಿಯೊಬ್ಬರೂ ತಾವು ಮಾಡಿದ್ದನ್ನು ಪ್ರೀತಿಸಿದ್ದು ಅದನ್ನು ಮಾಡತೊಡಗಿದ ಮೇಲೆ. ಅದಕ್ಕೋಸ್ಕರ ಯಾವುದೇ ಪ್ರವೇಶ ಪರೀಕ್ಷೆ ಪಾಸು ಮಾಡುವ ಮೊದಲೂ ಅಲ್ಲ, ಪಾಸು ಮಾಡಿದ ಬಳಿಕವೂ ಅಲ್ಲ. ಅವರು ಮಾಡಿದ್ದೇ ಅವರ ಬದುಕಾದದ್ದು ಹಾಗೆ. ಅತ್ಯಂತ ಪ್ರತಿಭಾವಂತ ವಿಜ್ಞಾನಿಗಳಲ್ಲೊಬ್ಬನಾದ ಥಾಮಸ್ ಆಲ್ವಾ ಎಡಿಸನ್ `ಜೀನಿಯಸ್ ಎಂಬುದು ಹತ್ತು ಪರ್ಸೆಂಟ್ ಸ್ಫೂರ್ತಿ, ತೊಂಬತ್ತು ಪರ್ಸೆಂಟ್ ಶ್ರಮ’ ಎಂದು ಹೇಳಿದ್ದಾನೆ.

ಕೆಲವೇ ಕೆಲವು ವಾಕ್ಯಬಂಧಗಳ ಮೇಲೆ ಮತ್ತು ಹೆಚ್ಚೆಂದರೆ ಒಂದೂವರೆ ಸಾವಿರ ಪದಗಳನ್ನು ಬಳಸುವ ಮೂಲಕ ತಮಗೆ ಇಂಗ್ಲಿಷ್ ಗೊತ್ತಿದೆ ಎಂಬ ಅಭಿಪ್ರಾಯವನ್ನು ಮೂಡಿಸಬಹುದು. ಆದರೆ, ಭಾಷೆ ‘ಗೊತ್ತಿರುವುದು’ ಬೇರೆ, ಮಾತಿನಲ್ಲಿಯೂ, ಬರವಣಿಗೆಯಲ್ಲಿಯೂ ಪ್ರಭುತ್ವವನ್ನು ಹೊಂದಿರುವುದು ಬೇರೆ. ಇಂಗ್ಲಿಷಿನಲ್ಲಿ ಮಾತಾಡುವ ಮತ್ತು ಬರೆಯುವ ಸಾಮರ್ಥ್ಯ ಎಂದರೆ, ಇಂಗ್ಲಿಷ್ ಭಾಷೆಯಲ್ಲಿನ ಎಲ್ಲಾ ಪದಬಂಧಗಳನ್ನು ಮತ್ತು ಕೆಲವು ಸಾವಿರ ಪದಗಳನ್ನು ಬಳಸುವ ಸಾಮರ್ಥ್ಯ ಎಂದು ಅರ್ಥ.
ಯೋಚನೆ ರೂಪುಗೊಳ್ಳುವುದು ಈ ವಾಕ್ಯಬಂಧಗಳು ಮತ್ತು ಪದ ಸಂಪತ್ತಿನ ಮೂಲಕ.

ವಿದ್ಯಾರ್ಥಿಗೆ ಮಾತು ಮತ್ತು ಬರವಣಿಗೆ ದಿನದಿನದ ಅಗತ್ಯದ ಸಣ್ಣ ವೃತ್ತವನ್ನು ದಾಟಿ ವಿವಿಧ ವಿಷಯಗಳ ಕುರಿತು ಮಾತಾಡುವ ಮತ್ತು ಬರೆಯುವ ಸಾಮರ್ಥ್ಯವಿರಬೇಕಾಗುತ್ತದೆ. ವಾಸ್ತವದಲ್ಲಿ ದಿನ ಬಳಕೆಗೆ ನಮ್ಮ ಸಮಾಜದಲ್ಲಿ ಯಾರಿಗೂ ಇಂಗ್ಲಿಷಿನ ‘ನೈಸರ್ಗಿಕ ಆಗತ್ಯ’ ಇರುವುದಿಲ್ಲ. ‘ಇಂಗ್ಲಿಷ್ ಮಾಧ್ಯಮ’ವಷ್ಟೇ ಅಲ್ಲದೆ, ‘ಆಂಗ್ಲ ಮಾಧ್ಯಮ’ ಎಂದು ತಮ್ಮನ್ನು ತಾವೇ ವರ್ಣಿಸಿಕೊಳ್ಳುವ ಶಾಲೆ- ಕಾಲೇಜುಗಳ ಕಂಪೌಂಡು ಗೋಡೆಗಳೊಳಗೆ ಆಂಗ್ಲೀಯ ನಡೆನುಡಿಗಳ ಅಗತ್ಯ ಇರಬಹುದು; ಹೊರಗಂತೂ ಇಲ್ಲ.

ಮಾಧ್ಯಮ ಯಾವುದೇ ಆಗಿರಲಿ, ವಿದ್ಯಾರ್ಥಿಗಿರಬೇಕಾದ ಸಾಮರ್ಥ್ಯ ಯಾವುದೆಂದರೆ ಸೃಜನಶೀಲವಾಗಿ ಯೋಚಿಸುವ ಸಾಮರ್ಥ್ಯ. ಅದಕ್ಕೆ ವಿದ್ಯಾರ್ಥಿಯ ಸ್ವಂತ ಭಾಷೆಯಲ್ಲಿಯೂ ಇಂಗ್ಲಿಷಿನಲ್ಲಿಯೂ ವಿಫುಲ ಅವಕಾಶವನ್ನು ಶಾಲೆ ಅಥವಾ ಕಾಲೇಜು ಒದಗಿಸಿಕೊಡಬೇಕು. ಕೇವಲ ‘ಆಂಗ್ಲ ಮಾಧ್ಯಮ’ ಎಂಬ ನಾಮಫಲಕದ ಬಲದಿಂದ ಯಾರೂ ಆಂಗ್ಲರಾಗುವುದು ಸಾಧ್ಯವಿಲ್ಲ. ಅದು ಸ್ವಂತ ಭಾಷೆಯ ಮೇಲೆ ಅನಾದರವನ್ನು ಹುಟ್ಟಿಸಬಹುದು ಮತ್ತು ತನ್ಮೂಲಕ ವಿದ್ಯಾರ್ಥಿಯ ಸೃಜನಶೀಲ ಚಿಂತನಶಕ್ತಿಯನ್ನು ಕುಂಠಿತಗೊಳಿಸಬಹುದು.

ಲೇಖಕರು: ಕೆ.ಟಿ. ಗಟ್ಟಿ

Saturday 6 August, 2011

ಲಾಗ ಹೊಡೆಯಲೊ ಮಂಗ, ಲಾಗ ಹೊಡೆಯಲೊ ಮಂಗ
ಬಗ್ಗಿ ದಣೀಯರ ಮುಂದೆ ಲಾಗ ಹೊಡಿಯೊ:
ಹಾಕು ಅಂತರ್ಲಾಗ, ಹಾಕು ಜಂತರ್ಲಾಗ-
ನೆರೆದ ಮಹನೀಯರಿಗೆ ಶರಣು ಹೊಡಿಯೊ.

ಇಸ್ತ್ರಿಮಾಡಿದ ಪ್ಯಾಂಟು, ಪ್ರಾಪು ತಲೆ, ಬುಶ್ ಕೋಟು
ತೊಗಲ ಚೀಲವ ಹಿಡಿದುಕೊಂಡು ಮಗನೆ
ಅತ್ತಿತ್ತ ಹಣಕಿದರೆ ಲತ್ತೆ ಬಿದ್ದಾವು ಬಾ,
ಕುತ್ತಿಗೆಯ ಹಗ್ಗವನು ಜಗ್ಗಿದೊಡನೆ,
-ಚನ್ನವೀರ ಕಣವಿ
’ನಮ್ಮೊಂದಿಗೆ ಪುಸ್ತಕಗಳಿದ್ದರೆ ನಾವೆಂದಿಗೂ ಒಬ್ಬಂಟಿಗರಾಗಿರುವುದಿಲ್ಲ ಎನ್ನುತ್ತಾರೆ - ಈ ದೇಶದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಕೃಷ್ಣನ್. ’ಒಂದು ಉತ್ತಮ ಗ್ರಂಥವನ್ನು ನಾಶಪಡಿಸುವುದೆಂದರೆ ಒಬ್ಬ ಸಜ್ಜನ ಮನುಷ್ಯನನ್ನೇ ಕೊಂದಂತೆ’ ಎನ್ನುತ್ತಾರೆ ಜಾನ್ ವಿಲ್ಟನ್.

ದೇಶದ ಮೊದಲ ಖಾಸಗಿ ರೇಡಿಯೋ ಕೇಂದ್ರ ಸ್ಥಾಪನೆಯ ರೂವಾರಿ......

ಡಾ:ಎಂ.ವಿ.ಗೋಪಾಲಸ್ವಾಮಿ

ಕರ್ನಾಟಕ ಹಲವು ರಂಗಗಳಲ್ಲಿ ಪ್ರಥಮ. ಎಲ್ಲ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗರಿ ಇರುವುದು ಕನ್ನಡಕ್ಕೆ. ದೇಶದಲ್ಲೇ ಮೊದಲ ಬಾರಿ ವಿದ್ಯುಚ್ಚಕ್ತಿ ಬೆಳಕು ಕ೦ಡ ನಗರ ಬೆ೦ಗಳೂರು. ಅ೦ತೆಯೇ ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರಿಗೆ ರೇಡಿಯೋ ಕೇ೦ದ್ರ ಸ್ಥಾಪಿಸುವ ಹುಮ್ಮಸ್ಸು ಬ೦ದು ಬಿಟ್ಟಿತ್ತು. ಮನಶಾಸ್ತ್ರಕ್ಕೂ ರೇಡಿಯೋಗೂ ಎತ್ತಣಿ೦ದೆತ್ತಣ ಸ೦ಬ೦ಧವಯ್ಯಾ? ಎನ್ನದಿರಿ. ಅವು 1935 ರ ದಿನಗಳು. ಕಾಲೇಜು ಮುಗಿಸಿ ಬ೦ದ ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಹುಮ್ಮಸ್ಸು.


ತಮ್ಮ ಒ೦ಟಿಕೊಪ್ಪಲಿನ ಮನೆಯಲ್ಲಿ 30 ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ಫಾರ್ಮರ್)ವೊಂದನ್ನು ಸ್ಥಾಪಿಸಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ 6 ರಿಂದ 8.30ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ 250 ವ್ಯಾಟ್ ಸಾಮರ್ಥ್ಯದ ಪ್ರೇಷಕ ಸ್ಥಾಪಿಸಿ ಮೈಸೂರಿನ ಸುತ್ತಮುತ್ತ 25 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಅನುವು ಮಾಡಲಾಗಿತ್ತು. ಈ ಬಾನುಲಿ ಕೇಂದ್ರ ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸವು ‘ಆಕಾಶವಾಣಿ’ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು. ಆಗ ನಾ.ಕಸ್ತೂರಿಯವರು "ಆಕಾಶವಾಣಿ" ಎ೦ಬ ಹೆಸರನ್ನು ಸೂಚಿಸಿದರು. ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು 1942ರಲ್ಲಿ ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು. 1950ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ಪ್ರಸಾರ ಸೇವೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು. 1950ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಕಡಿಮೆ ಸಾಮರ್ಥ್ಯ ಪ್ರೇಷಕದೊಂದಿಗೆ ಪ್ರಸಾರ ಮಾಡುತ್ತಿದ್ದದು ಹೆಗ್ಗಳಿಕೆ .


ಜೀವನ ನಡೆಸುವುದೇ ಒಂದು ಸಾದನೆಯಾದರೆ ಜೀವನ ನಶ್ವರ ಎನಿಸುತ್ತದೆ ಯಾವುದಾದರೂ ಸಾದನೆ ಮಾಡಲು ಜೀವನ ನಡೆಸಿದರೆ ಜೀವನ ಸಾರ್ಥಕ ಎನಿಸುತ್ತದೆ

ಕನ್ನಡ ಪದಗೊಳು.ಜಿ.ಪಿ.ರಾಜರತ್ನಂ

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'
ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!


'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ

ಹಾಡು ಹಕ್ಕಿಗಳೆ ಹಾರಿ ಬಾನಿಗೆ. ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು.

ಹಾಡು ಹಕ್ಕಿಗಳೆ ಹಾರಿ ಬಾನಿಗೆ
ಮರದ ಗೂಡಿನಿಂದ ;
ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ
ಒಳಗಿನ ಆನಂದ.

ಕಣ್ಣ ಪಡೆದಿರಿ ಬಣ್ಣ ಪಡೆದಿರಿ
ರೆಕ್ಕೆ ಪುಕ್ಕ ಮಾಟ ;
ಕಾಲು ಬಲಿಯಿತು ಕಾಲ ಸಂದಿತು
ಇನ್ನು ಹಾರುವಾಟ.

ದಾರಿ ದಾರಿಯಲಿ ರೆಂಬೆ ರೆಂಬೆಯಲಿ
ಕುತೂ ರಾಗ ಹಾಡಿ ;
ದಾರಿ ಸಾಗುವಾ ದಣಿದ ಜೀವಕೆ
ಕೊಂಚ ಮುದವ ನೀಡಿ.

ನಿಮ್ಮ ದನಿಯ ಆನಂದ ಚಿಮ್ಮಲಿ
ಕೇಳಿದವರ ಎದೆಗೆ ;
ಯಾವ ಹಕ್ಕಿ ಇವು, ಬಂದುದೆಲ್ಲಿಂದ

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು.


ಹರಿವ ನದಿಯು ನೀನು
ಸುರಿವ ಮಳೆಯು ನೀನು
ನೆಲದಿ ಬಿದ್ದ ಬೀಜ ಮೊಳೆಸಿ
ಫಲದಿ ಬಂದೆ ನೀನು

ಹೂವು ಹಣ್ಣ ಮೈಯೊಳು
ಹೊತ್ತ ಬಳ್ಳಿ ನೀನು
ತಾರೆಗಳಿಗೆ ತೀರವಾಗಿ
ನಿಂತ ಬಾನು ನೀನು

ಭಾರ ತಾಳಿ ನಗುವೆ
ನೋವ ಹೂಳಿ ನಲಿವೆ
ಲೋಕವನೇ ಸಾಕಲು
ನಿನ್ನ ಬಾಳ ಸುಡುವೆ

ಮರೆಯ ಬಾಳು ನಿನ್ನದು
ಹೊರುವ ಬಾಳು ನಿನ್ನದು
ಆನಂದದಿ ಇರಲು ನಾವು
ತೆರುವ ಬಾಳು ನಿನ್ನದು.

ಅತ್ತಿಮಬ್ಬೆ

ಕ್ರಿ. ಶ.೧೦ನೇ ಶತಮಾನದಲ್ಲಿ ಸಮಾಜಕ್ಕೆ ಕಳಶಪ್ರಾಯವಾಗಿ ಬದುಕಿದ್ದಮಹಿಳೆ. ಅತ್ತಿಮಬ್ಬೆ ವೆಂಗಿನಾಡಿನ ಕಮ್ಮದೇಶದ ಪುಂಗನೂರಿನ ಮಲ್ಲಪಯ್ಯನ ಮಗಳು. ಮಲ್ಲಪಯ್ಯನ ತಮ್ಮ ಪೊನಮಯ್ಯ. ಇವರಿಬ್ಬರೂ ಪೊನ್ನನಿಂದ ಶಾಂತಿ ಪುರಾಣವನ್ನು ಬರೆಯಿಸಿದರು. ಚಾಲುಕ್ಯ ವಂಶದ ತೈಲಪಚಕ್ರವರ್ತಿಯ ಆಪ್ತಮಂತ್ರಿ ದಲ್ಲಪ. ಆತನ ಮಗ ನಾಗಮಯ್ಯ, ತಂದೆಯ ಮಂತ್ರಿಮಂಡಲದಲ್ಲಿಯೇ ಸೇನಾನಾಯಕನಾಗಿದ್ದ. ಅತ್ತಿಮಬ್ಬೆ ಮತ್ತು ಆಕೆಯ ತಂಗಿ ಗುಂಡಮಬ್ಬೆಯನ್ನು ನಾಗದೇವನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.

ಅತ್ತಿಮಬ್ಬೆ ನಾಗಮಯ್ಯರ ಮಗ ಅಣ್ಣಿಗದೇವ.ವೀರ ನಾಗಮಯ್ಯ ರಣರಂಗದಲ್ಲಿ ಮೃತನಾಗುತ್ತಾನೆ.ಪತಿಯೊಂದಿಗೆ ಅತ್ತಿಮಬ್ಬೆ ಸಹಗಮನಕ್ಕಾಗಿ ಸಿದ್ಧಳಾದಾಗ, ಎಳೆಯ ಪ್ರಾಯದ ಅಣ್ಣಿಗದೇವನನ್ನು ಸಾಕಿ ಸಲಹುವ ಜವಾಬ್ಡಾರಿಯನ್ನು ಗುಂಡುಮಬ್ಬೆಯು ತನ್ನ ಅಕ್ಕನಿಗೆ ವಹಿಸಿ ತಾನು ಸತಿ ಹೋಗುತ್ತಾಳೆ. ಒಬ್ಬೊಂಟಿಗಳಾದ ಅತ್ತಿಮಬ್ಬೆ ಸುತನ ಜವಾಬ್ದಾರಿಯೊಂದಿಗೆ ಪತಿಯ ಕೆಲಸದ ಜವಾಬ್ದಾರಿಯನ್ನೂ ಸಹ ಹೊತ್ತು ರಾಜಕಾರಣದಲ್ಲಿ ತೈಲಪಚಕ್ರವರ್ತಿಗೂ ತಾಯಿಯಂತೆ ಸಲಹೆ ನೀಡುತ್ತಿದ್ದಳು.

ಕೊಡುಗೈ ದಾನಿಯಾಗಿ ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ದಾನಮಾಡಿದಳು. ಆಕೆಯಿದ್ದ ಸಂವತ್ಸರಕ್ಕೆ ೧೫೦೦ ವರ್ಷಗಳ ಹಿಂದೆ ಮಹಾವೀರನ ನಿರ್ವಾಣವಾಗಿದ್ದುದರಿಂದ, ಮಹಾವೀರನ ೧೫೦೦ ಮಣಿಖಚಿತ ಸುವರ್ಣ ಬಿಂಬಗಳನ್ನು ಮಾಡಿಸಿ ಅದನ್ನು ದಾನ ಮಾಡಿದ್ದಾಳೆ. ೧೫೦೦ ಸುವರ್ಣ ಜಯಘಂಟೆಗಳನ್ನೂ, ಸುವರ್ಣ ತೋರಣಗಳನ್ನೂ, ಮರದ ಮಂದಾಸನಗಳನ್ನೂ ಮಾಡಿಸಿ ದಾನ ಮಾಡಿದ್ದಾಳೆ. ಆಕೆ ೧೫೦೦ ಬಸದಿಗಳ ನಿರ್ಮಾಣವನ್ನು ಮಾಡಿಸಿದ್ದಾಗಿಯೂ ಆ ಬಸದಿಗಳಿಗೆಲ್ಲಾ ಮಿಗಿಲಾದದ್ದು ಈ ಬ್ರಹ್ಮಜಿನಾಲಯ ಎಂದು ಲಕ್ಕುಂಡಿಯ ಬ್ರಹ್ಮಜಿನಾಲಯದ ಶಾಸನ ಸಾರಿ ಹೇಳುತ್ತಿದೆ. ಕವಿಚಕ್ರವರ್ತಿಯಾದ ರನ್ನನಿಗೆ ಆಶ್ರಯದಾತಳಾಗಿದ್ದು, ಆತನಿಂದ ಅಜಿತನಾಥ ಪುರಾಣದ ರಚನೆಗೆ ಕಾರಣಳಾದಳು. ರನ್ನನನ್ನು ತೈಲಪನ ಆಸ್ಥಾನಕ್ಕೆ ಸೇರಿಸಿದ ಕೀರ್ತಿ ಅತ್ತಿಮಬ್ಬೆಯದು. ಪೊನ್ನನ ಶಾಂತಿಪುರಾಣದ ೧೦೦೦ ಪ್ರತಿಗಳನ್ನು ಮಾಡಿಸಿ ಸಾಹಿತ್ಯ ನಿರ್ಮಾಣ ಹಾಗೂ ಅದರ ಪೋಷಣೆಗೆ ಕಾರಣಳಾಗಿದ್ದಾಳೆ.

ಧಾರ್ಮಿಕ, ಸಾಹಿತ್ಯಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅತ್ತಿಮಬ್ಬೆಯಿಂದ ಸಂದ ಸೇವೆ ಅಪಾರವಾದದ್ದಾಗಿದೆ. ಪುರುಷ ಪ್ರಧಾನ ಸಮಾಜವಾಗಿದ್ದ ಕ್ರಿ. ಶ. ೧೦ನೆಯ ಶತಮಾನದಲ್ಲಿ ಒಬ್ಬೊಂಟಿ, ವಿಧವೆ ಹೆಣ್ಣು ಇಷ್ಟೊಂದು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ರುವುದು ಮಹತ್ವಪೂರ್ಣದ್ದಾಗಿದೆ.

ಉಲ್ಲೇಖಗಳು:
ಅಜಿತನಾಥ ಪುರಾಣ, ಶಾಂತಿ ಪುರಾಣ, ಸಮಯ ಪರೀಕ್ಷೆ, ಲಕ್ಕುಂಡಿಯ ಶಾಸನಗಳು, ಸಮಾಲೋಕನದಲ್ಲಿನ ತಿ.ನಂ.ಶ್ರಿ ಅವರ ಲೇಖನ
ಅತ್ತಿಮಬ್ಬೆಯ ಕಲ್ಪಿತ ಚಿತ್ರ

ಅತ್ತಿಮಬ್ಬೆಯ ಬಿರುದುಗಳು : ಕವಿವರ ಕಾಮಧೇನು, ಗುಣದಂಕಕಾರ್ತಿ, ಜಿನಶಾಸನದೀಪಿಕೆ, ದಾನಚಿಂತಾಮಣಿ, ಗುಣದಖಣಿ, ಜೈನ ಶಾಸನ ರಕ್ಷಾಮಣಿ, ಅಕಲಂಕಚರಿತೆ, ಸಜ್ಜನೈಕ ಚೂಡಾಮಣಿ, ಸರ್ವಕಳಾವಿದೆ ಮುಂತಾದುವು.

೧೯೯೪ ನೇ ಇಸವಿಗೆ ಆಕೆ ಇದ್ದು ಒಂದು ಸಹಸ್ರ ವರ್ಷಗಳಾಗಿದ್ದುದರಿಂದ ೧೯೯೪ನೇ ವರ್ಷವನ್ನು ಕರ್ನಾಟಕ ಸರ್ಕಾರ ಅತ್ತಿಮಬ್ಬೆ ವರ್ಷವೆಂದು ಘೋಷಿಸಿತ್ತು. ಅತಂದಿನಿಂದ ಆಕೆಯ ಸ್ಮರಣಾರ್ಥ ಅತ್ತಿಮಬ್ಬೆ ಪ್ರಶಸ್ತಿಯನ್ನೂ ಸಹ ಪ್ರತಿಷ್ಠಾಪಿಸಿದೆ.

ವಿದ್ಯೆ

ವಿದ್ಯೆ ಸುಲಭವಾಗಿ ದಕ್ಕುವ ವಸ್ತುವಲ್ಲ ತಪಸ್ಸಿನಿಂದ ಮಾತ್ರ ಶಾರದೆಯನ್ನು ಒಲಿಸಿಕೊಳ್ಳಲು ಸಾಧ್ಯ. ಈ ಮಾತು ಕರ್ನಾಟಕ ಸಂಗೀತ ಪರಂಪರೆಯ ಮಹಾನ್‌ ಸಾಧಕ ಬಿಡಾರಂ ಕೃಷ್ಣಪ್ಪನವರು ತಮ್ಮಲ್ಲಿ ಶಿಷ್ಯವೃತ್ತಿಯನ್ನರಸಿ ಬಂದ ಹದಿನಾರರ ತರುಣ ಚೌಡಯ್ಯನಿಗೆ ಹೇಳಿದ್ದು.