Friday 15 June 2012ನಿರಂಜನ


೧೫.೬.೧೯೨೪

೧೩.೩.೧೯೯೨

‘ಆಳುವ ಪರಕೀಯರ ಹಂಗುಬೇಡ’ ಎಂದು ಎಸ್‌.ಎಸ್‌.ಎಲ್‌.ಸಿ.ಪ್ರಮಾಣ ಪತ್ರವನ್ನೇ ಸ್ವೀಕರಿಸದೆ ಕಾಸರಗೋಡಿನ ನೀಲೇಶ್ವರ ಹೈಸ್ಕೂಲಿನಿಂದ ಹೊರನಡೆದ ಸಮಾಜ ಸುಧಾರಕ, ರೈತ ಹೋರಾಟಗಾರ, ಸಾಹಿತ್ಯಚಳುವಳಿಯ ನೇತಾರ ಕುಳಕುಂದ ಶಿವರಾಯರು ಹುಟ್ಟಿದ್ದು ದ.ಕ. ಜಿಲ್ಲೆಯ ಕುಳಕುಂದದಲ್ಲಿ ೧೯೨೫ ರ ಜೂನ್‌ ೧೫ ರಂದು. ತಾಯಿ ಚಿನ್ನಮ್ಮ, ತಂದೆ ಶ್ರೀನಿವಾಸರಾಯರು. ಆರು ತಿಂಗಳು ಮಗುವಾಗಿದ್ದಾಗ ಮಗುವಿನೊಡನೆ ತಾಯಿ ಬಂದು ನೆಲೆಸಿದ್ದು ಕಾವು ಎಂಬ ಹಳ್ಳಿಯಲ್ಲಿ.

ಕಾವುನಲ್ಲಿ ಲೋಯರ್ ಎಲಿಮೆಂಟರಿ ಶಾಲೆಯಲ್ಲಿ ಮೂರು ವರ್ಷ ಓದಿದ ನಂತರ ಸುಳ್ಯದ ಹೈಯರ್ ಎಲಿಮೆಂಟರಿ ಶಾಲೆ. ಸುಳ್ಯದ ನಂತರ ಹೈಸ್ಕೂಲಿಗೆ ಸೇರಿದ್ದು ನೀಲೇಶ್ವರದ ರಾಜಾಸ್‌ ಹೈಸ್ಕೂಲು. ಅಷ್ಟರಲ್ಲಾಗಲೇ ಶಿವರಾಮ ಕಾರಂತರ ಮಕ್ಕಳ ಕೂಟ, ವಿಟ್ಲ-ಕನ್ಯಾನದ ಮಕ್ಕಳ ಕೂಟ, ಪುತ್ತೂರು ನಾಡಹಬ್ಬ ಮುಂತಾದೆಡೆ ಸ್ವಯಂಸೇವಕನಾಗಿ ರಾಜರತ್ನಂ, ಗೊರೂರು, ವಿ.ಸೀ, ಅ.ನ.ಕೃ., ಮುಂತಾದ ಗಣ್ಯ ಸಾಹಿತಿಗಳನ್ನು ಹತ್ತಿರದಿಂದ ಕಂಡದ್ದು.

ಹೈಸ್ಕೂಲಿನಲ್ಲಿದ್ದಾಗಲೇ ಕೈ ಬರಹದ ಪತ್ರಿಕೆಯನ್ನೂ ಹೊರಡಿಸಿ ಅದಕ್ಕಾಗಿ ಬರೆದ ಹಲವಾರು ಚಿಕ್ಕ ಚಿಕ್ಕ ಕತೆ, ಲೇಖನಗಳು. ಈ ಸಂದರ್ಭದಲ್ಲೆ ಕಮ್ಯೂನಿಸಂ ಪರಿಚಯ ಮಾಡಿಕೊಂಡು, ವರ್ಷಾರಂಭದಲ್ಲಿ ಕಾಸರಗೋಡು ತಾಲ್ಲೂಕು ವಿದ್ಯಾರ್ಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯ ಜವಾಬ್ದಾರಿ.

ಶಿವರಾಯರ ಮೊದಲ ಬರಹ ಪ್ರಕಟವಾದುದು ಫಣಿಯಾಡಿಯವರ ತುಳು ಭಾಷೆಯ ‘ತುಳುನಾಡು’ ಪತ್ರಿಕೆಯಲ್ಲಿ ಕಿಶೋರ ಎಂಬ ಕಾವ್ಯನಾಮದಿಂದ.

ಎಸ್‌.ಎಸ್‌.ಎಲ್‌.ಸಿ.ಯ ನಂತರ ಮಂಗಳೂರಿಗೆ ತೆರಳಿದ ಶಿವರಾಯರು ಸೇರಿದ್ದು ರಾಷ್ಟ್ರ ಬಂಧು ಪತ್ರಿಕೆಯ ಉಪಸಂಪಾದಕರಾಗಿ. ಆದರೆ ಈ ಹಿಂದೆಯೇ ರಾಷ್ಟ್ರಬಂಧು ಪತ್ರಿಕೆಗೆ ಕಿಶೋರ, ಕುಳಕುಂದ, ಕತೆಗಾರ ಎಂಬ ಹೆಸರಿನಿಂದ ಚಿಕ್ಕ ಕತೆಗಳನ್ನೂ ಬರೆದು ಕಳುಹಿಸಿತೊಡಗಿದ್ದು, ಇವರ ವಿಳಾಸ ಕುಳಕುಂದ ಶಿವರಾಯ, ಟೋಲ್‌ಗೇಟ್‌, ಸುಳ್ಯ ಎಂದಿರುತ್ತಿದ್ದು ನಂತರ ನೀಲೇಶ್ವರದ ರಾಜಾಸ್‌ ಹೈಸ್ಕೂಲು ವಿಳಾಸ ನೀಡಿದಾಗ, ಇವರಾರೋ ವಯಸ್ಸಾದ ಶಾಲಾ ಪ್ರಾಧ್ಯಾಪಕರಾಗಿರಬೇಕೆಂದು ಭಾವಿಸಿದ್ದ ರಾಷ್ಟ್ರಬಂಧು ಪತ್ರಿಕೆಯವರು, ಶಿವರಾಯರು ಎಸ್‌.ಎಸ್‌.ಎಲ್‌.ಸಿ. ನಂತರ ಪತ್ರಿಕಾ ಕಚೇರಿಯನ್ನೂ ಪ್ರವೇಶಿಸಿದಾಗಲೇ ವಿದ್ಯಾರ್ಥಿ ಎಂದು ತಿಳಿದಾಗ ಆಶ್ಚರ್ಯಗೊಂಡರು. ರಾಷ್ಟ್ರಬಂಧು ಪತ್ರಿಕೆಯಲ್ಲಿದ್ದಾಗಲೇ ಬಸವರಾಜಕಟ್ಟೀಮನಿಯವರ ಉಷಾ ಪತ್ರಿಕೆಗೂ ಕತೆಗಳನ್ನೂ ಕಳುಹಿಸತೊಡಗಿದ್ದರು.

ಇವರ ಮೊದಲ ಕತಾ ಸಂಕಲನ ಅಯ್ಯನ್ಯೆ ಪ್ರಕಟವಾದಾಗ ಇವರಿಗೆ ೨೧ ರ ಹರೆಯ (೧೯೪೫).
ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಂಗಳೂರಿನ ತಾಯಿನಾಡು, DAILY NEWS, ಜನವಾಣಿ ದೈನಿಕಗಳಿಗೆ ಮಂಗಳೂರು ಸುದ್ದಿಗಾರರಾಗಿ, ನವಭಾರತ ಮತ್ತು ರಾಷ್ಟ್ರಬಂಧು ಸಾಪ್ತಾಹಿಕಕ್ಕೆ ನಗರ ಪ್ರತಿನಿಧಿಯಾಗಿಯೂ ದುಡಿದರು.

ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಾಗಿ, ಅದರ ತತ್ತ್ವ ಪ್ರಣಾಳಿಕೆಯಲ್ಲಿ ಆಸಕ್ತಿ ಹೆಚ್ಚಿ, ದಾಸ್ಯದ ವಿರುದ್ಧ ದೇಶ ಸಂಘಟಿತವಾಗಬೇಕು, ಶೋಷಣೆಯ ವಿರುದ್ಧ ಹೋರಾಡಬೇಕು, ಬಡತನ, ದೀನತೆಗಳು ಹೋಗಿ ಸರ್ವರೂ ಸಮ ಸುಖಿಗಳಾಗಬೇಕು ಎಂದು ಬಯಸಿದರು.

ಕುಳಕುಂದ ಶಿವರಾಯರ ಸಂಪಾದಕತ್ವದಲ್ಲಿ ಹುಬ್ಬಳ್ಳಿಯಲ್ಲಿ ಕಮ್ಯೂನಿಸ್ಟ್‌ ವಾರಪತ್ರಿಕೆ ‘ಜನಶಕ್ತಿ’ಯನ್ನೂ ಪ್ರಾರಂಭಿಸಿದರಾದರೂ ಸೈದ್ಧಾಂತಿಕವಾಗಿ ಭ್ರಮನಿರಸನಹೊಂದಿ, ಕಮ್ಯುನಿಸ್ಟ್‌ ಪಕ್ಷವನ್ನು ತ್ಯಜಿಸಿದರು. ಪಕ್ಷದಿಂದ ಹೊರಬಂದ ನಂತರ ಹೊಸ ಹೊಟ್ಟು, ಹೊಸ ಹೆಸರಿನಿಂದಲೇ ಬರೆಯಬೇಕೆನಿಸಿ ‘ನಿರಂಜನ’ ಎಂಬ ಹೆಸರಿನಿಂದ (೧೯೫೧) ಬರೆಯತೊಡಗಿದರು.

ನಂತರ ಬೆಂಗಳೂರಿನ ಪ್ರಜಾಮತ ಸಹ ಸಂಪಾದಕರಾಗಿ ಸೇರ್ಪಡೆಯಾದರು. ೧೯೪೬ ರಲ್ಲಿ ಅಯ್ಯನೈ ಕಥಾಸಂಕಲನವು ‘ಸಂಧಿಕಾಲ’ ಎಂಬ ಹೊಸ ಆವೃತ್ತಿಯಾಗಿ ಪ್ರಕಟವಾದ ನಂತರ ೧೯೪೭ ರಲ್ಲಿ ‘ರಕ್ತಸರೋವರ’, ೧೯೫೨ ರಲ್ಲಿ ‘ಅನ್ನಪೂರ್ಣ’ ಕಥಾಸಂಕಲನಗಳು ಪ್ರಕಟಗೊಂಡವು.

ಪತ್ರಿಕೋದ್ಯಮ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ನಿರಂಜನರು ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯತೊಡಗಿದರು. ಬೆಂಗಳೂರಿನ ಪ್ರಜಾಮತ ವಾರಪತ್ರಿಕೆಯಲ್ಲಿ ಸರೂ ಕೇಳಿದೆಯಾ? (೧೯೪೫), ಉಷಾ ಪತ್ರಿಕೆಯಲ್ಲಿ ಸರೋಜ ಸಂಚಯ (೧೯೪೬), ಸಾಧನ ಸಂಚಯ (೧೯೫೧), [ಈ ಸಾಧನ ಸಂಚಯ ಅಂಕಣವು ಜನಪ್ರಗತಿಯಲ್ಲಿ ಮುಂದುವರೆಯಿತು] ಚಿತ್ರಗುಪ್ತ ಪತ್ರಿಕೆಯಲ್ಲಿ ಓದುಗರೊಡನೆ ಐದುನಿಮಿಷ (೧೯೫೨), ಹುಬ್ಬಳ್ಳಿಯ ಜನಶಕ್ತಿ ಪತ್ರಿಕೆಯಲ್ಲಿ ಸಂಗಾತಿಯ ಸಂಚಯ (೧೯೪೭), ದಾವಣಗೆರೆಯ ನವಶಕ್ತಿ ವಾರಪತ್ರಿಕೆಯಲ್ಲಿ ಬಿಸಿಲು ಬೆಳದಿಂಗಳು (೧೯೫೨) ಮುಂಬಯಿಯ ‘ಚೇತನ’ ಪತ್ರಿಕೆಯ ಮಾಸಿಕ ಅಂಕಣ (೧೯೫೨), ಹೈದರಾಬಾದಿನ ಸಾಧನ ವಾರಪತ್ರಿಕೆಯಲ್ಲಿ ಮಧುಸಂಚಯ (೧೯೫೬) ಮತ್ತು ಬೆಂಗಳೂರಿನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗಾಗಿ ‘ಬೇವು ಬೆಲ್ಲ’ (೧೯೬೨) ಇವು ವಿವಿಧ ಪತ್ರಿಕೆಗಳಲ್ಲಿ ನಿರ್ವಹಿಸಿದ ಅಂಕಣ ಬರಹಗಳು.

ಸಾಧನ ಸಂಚಯ ಅಂಕಣ ಬರಹಕ್ಕೆ ಮಾರುಹೋದ ಮತ್ತು ಉಷಾಪತ್ರಿಕೆಗೆ ಸಣ್ಣ ಪುಟ್ಟ ಕತೆಗಳನ್ನು ಆಗಾಗ್ಗೆ ಬರೆಯುತ್ತಿದ್ದ ವೆಂಕಟಲಕ್ಷ್ಮೀ (ಅನುಪಮಾ) ಯವರಿಗೆ ನಿರಂಜನರ ಪರಿಚಯವಾಗಿ, ಇವರೂ ನಿರಂಜನರ ವ್ಯಕ್ತಿತ್ವಕ್ಕೆ ಮಾರುಹೋದಾಗ ನಿಂಜನರು ಅನುಪಮರವನ್ನೂ ಮದುವೆಯಾದರು.

ವಿಮೋಚನೆ ಕಾದಂಬರಿಯನ್ನೂ ಬರೆದ ನಂತರ ಬನಶಂಕರಿ, ಸೌಭಾಗ್ಯ, ಅಭಯ, ರಂಗಮ್ಮನ ವಠಾರ ಮುಂತಾದ ಕಾದಂಬರಿಗಳನ್ನು ಬರೆದರು. ಹಲವಾರು ಕಾದಂಬರಿಗಳು ಮರುಮುದ್ರಣವಾದುದಲ್ಲದೆ ತೆಲುಗು, ಮಲಯಾಳಂ, ಭಾಷೆಗೂ ಅನುವಾದಗೊಂಡವು. ಚಿರಸ್ಮರಣೆ (೧೯೫೫) ಮತ್ತು ಮೃತ್ಯುಂಜಯ (೧೯೭೬) ಕಾದಂಬರಿಗಳು ಮಲಯಾಳಂ, ತೆಲುಗು, ತಮಿಳು, ಮರಾಠಿ, ಬಂಗಾಳಿ, ತುಳು, ಇಂಗ್ಲಿಷ್‌ ಭಾಷೆಗೂ ಭಾಷಾಂತರಗೊಂಡಿವೆ. ಇವರು ಅನುವಾದಿಸಿದ ಕಾದಂಬರಿಗಳು ತಾಯಿ (ಮಾಕ್ಸಿಂಗಾರ್ಕಿ ಕಾದಂಬರಿ) ‘ಮದುವಣಗಿತ್ತಿ, ಮಾನವನ ಪಾಡು, ಅಧಃಪತನ, ಚೀನಾದೇಶದ ನೀತಿ ಕಥೆಗಳು ಮುಂತಾದವುಗಳು.

ಸಾಹಿತ್ಯಾಸಕ್ತಿಯಿಂದ ತಮ್ಮ ಹರೆಯದ ವಯಸ್ಸಿನಿಂದಲೇ ಕಾಸರಗೋಡು ಸಮ್ಮೇಳನ (ಅಧ್ಯಕ್ಷರು-ತಿ.ತಾ.ಶರ್ಮ), ಮುಂಬಯಿಯ ಸಾಹಿತ್ಯ ಸಮ್ಮೇಳನ (ಅಧ್ಯಕ್ಷರು-ಗೋವಿಂದಪೈ), ಬೇಲೂರು ಸಾಹಿತ್ಯ ಸಮ್ಮೇಳನ (ಎಸ್‌.ಸಿ. ನಂದೀಮಠ), ಮೈಸೂರಿನಲ್ಲಿ ನಡೆದ ಸಮ್ಮೇಳನ (ಶಿವರಾಮ ಕಾರಂತರು) ಮುಂತಾದವುಗಳಲ್ಲಿ ಪ್ರತ್ಯಕ್ಷದರ್ಶಿಯಾಗಿ ಹಾಜರಾಗಿದ್ದರಲ್ಲದೆ ರಾಯಚೂರು ಸಮ್ಮೇಳನ (೧೯೫೫-ಆದ್ಯರಂಗಾಚಾರ್ಯ)ದಲ್ಲಿ ಲೇಖಕರ ಗೋಷ್ಠಿಯ ಅಧ್ಯಕ್ಷರಾಗಿಯೂ ಪಾಲ್ಗೊಂಡರು.

ಬೆಂಗಳೂರಿಗೆ ವಾಸ್ತವ್ಯವನ್ನು ಬದಲಿಸಿದಾಗ ಜಿ.ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿದ್ದಾಗ ಇವರು ಕಾರ್ಯದರ್ಶಿಯಾಗಿ ನಿಯೋಜಿತರಾಗಿ (೧೯೬೪) ಕೆಲ ತಿಂಗಳು ಕಾರ್ಯ ನಿರ್ವಹಿಸಿದರು. ಪರಿಷತ್ತಿನ ಈ ಕಾರ್ಯಗೌರವದಿಂದ ನಿರ್ಗಮಿಸಿದ ನಂತರ ಇಂಡಿಯನ್‌ ನ್ಯೂಸ್‌ ಅಂಡ್‌ ಫೀಚರ್ ಅಲಯನ್ಸ್‌ (ದೆಹಲಿಯ ಇನ್ಫಾ) ಸಂಸ್ಥೆಗೆ ಕಾರ್ಯನಿರತ ಪತ್ರಿಕೋದ್ಯಮಿಯಾಗಿ ‘ರಾಜಧಾನಿಯಿಂದ’, ಮತ್ತು ದಿನಚರಿಯಿಂದ ಎಂಬ ಎರಡು ಅಂಕಣಗಳನ್ನು ನಿರ್ವಹಿಸಿದರು.

ಸುಮಾರು ೨೫ ಕಾದಂಬರಿಗಳು; ೧೨ ಕಥಾ ಸಂಕಲನಗಳು; ಆರು ನಾಟಕಗಳು, ಜೀವನ ವೃತ್ತ, ವ್ಯಕ್ತಿಚಿತ್ರ ಸಂಗ್ರಹ; ಲೇಖನಗಳ ಸಂಗ್ರಹದ ೮ ಪುಸ್ತಕಗಳು; ಅಂಕಣ ಬರಹಗಳ ೮ ಕೃತಿಗಳು; ರಾಜಕೀಯ ಭಾಷಾಂತರದ ಸುಮಾರು ೧೫ ಕೃತಿಗಳಲ್ಲದೆ ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಮಹತ್ವದ ಕೃತಿಗಳೆಂದರೆ ಕರ್ನಾಟಕ ಸಹಕಾರಿ ಪ್ರಕಾಶನದಿಂದ ೭ ಸಂಪುಟಗಳಲ್ಲಿ ಪ್ರಕಟವಾದ ‘ಜ್ಞಾನ ಗಂಗೋತ್ರಿ’ ಮತ್ತು ೨೫ ಸಂಪುಟಗಳಲ್ಲಿ ಪ್ರಕಟಗೊಂಡ ಜಗತ್ತಿನ ಶ್ರೇಷ್ಠ ಸಣ್ಣ ಕಥೆಗಳ ‘ ವಿಶ್ವಕಥಾ ಕೋಶ’ ಕನ್ನಡ ಸಾಹಿತ್ಯಕ್ಕೆ ವಿಶಿಷ್ಠ ಕೊಡುಗೆ. ಇದಲ್ಲದೆ ಜನತಾ ಸಾಹಿತ್ಯ ಪ್ರಕಾಶನದಿಂದ ೨೫ ಪುಸ್ತಕಗಳು, ಪುರೋಗಾಮಿ ಪ್ರಕಾಶನದಿಂದ ೮ ಕೃತಿಗಳು ಪ್ರಕಟಗೊಂಡಿವೆ.

ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್‌ ಲ್ಯಾಂಡ್‌ ನೆಹರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಹಾಗೂ ಗೌರವ ಸಂಪುಟವಾಗಿ ಮುದ್ರಿಸಿದ ‘ಪ್ರತಿಧ್ವನಿ’ ಗ್ರಂಥ, ಪುತ್ತೂರಿನ ಕರ್ನಾಟಕ ಸಂಘದಿಂದ ೧೯೮೬ ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ನಿರಂಜನ ಅಭಿನಂದನ’.

ಹೀಗೆ ಸಾಹಿತ್ಯ, ಪತ್ರಿಕೋದ್ಯಮಗಳಿಗೆ ವಿಶಿಷ್ಠಕೊಡುಗೆ ನೀಡಿದ ನಿರಂಜನರು ಪಾರ್ಶ್ವವಾಯು ಪೀಡಿತರಾದರೂ ವಿಶ್ವಕಥಾಕೋಶದ ಯೋಜನೆಯನ್ನೂ ಪೂರ್ಣಗೊಳಿಸಿ ಕರ್ನಾಟಕ ಸಹಕಾರಿ ಪ್ರಕಾಶನಕ್ಕೆ ವಿದಾಯ ಹೇಳಿದರು. ಆದರೆ ಈ ಹಿಂದೆಯೇ ಅನುಪಮಾ ನಿಂಜನರವರನ್ನು ಕಾಡುತ್ತಿದ್ದ ಕ್ಯಾನ್ಸರ್ ಖಾಯಿಲೆಯು ಇವರನ್ನೂ ಧೃತಿಗೆಡಿಸಿತ್ತು. ಅನುಪಮಾರವರ ನಿಧನದ ನಂತರ (೧೫.೨.೯೧) ನಿರಂಜನರೂ ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೯೨ ರ ಮಾರ್ಚ್ ೧೩ರಂದು.
ಮಲ್ಲಿಕಾ ಕಡಿದಾಳ್‌ ಮಂಜಪ್ಪ
೧೫.೬.೧೯೨೦

‘ಶ್ರೀವಿವೇಕಾನಂದವಿಜಯಂ’ ಎಂಬ ಮಹಾಕಾವ್ಯ ರಚಿಸಿ, ಲೇಖಕಿಯರಲ್ಲಿ ಪ್ರಪ್ರಥಮರಾಗಿ ಮಹಾಕಾವ್ಯ ರಚಿಸಿದ ಖ್ಯಾತಿಗೆ ಪಾತ್ರರಾಗಿರುವ ಮಲ್ಲಿಕಾ ಕಡಿದಾಳ್‌ ಮಂಜಪ್ಪನವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕನಾಲೆ ಹಳ್ಳಿಯ ‘ಬಾಗಮನೆ’ ಮನೆತನದಲ್ಲಿ ೧೯೨೦ರ ಜೂನ್‌ ೧೫ರಂದು. ತಂದೆ ಚನ್ನೇಗೌಡ ಬಾಗಮನೆ, ತಾಯಿ ಪಾರ್ವತಮ್ಮನವರ ಎಂಟು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳಲ್ಲಿ ನಾಲ್ಕನೆಯವರು.

ಅತ್ತಿಗೊಂಡ ಎಸ್ಟೇಟಿನ ಅರಮನೆಯಂತಹ ಮನೆಯಲ್ಲಿ ರಾಜಕುಮಾರಿಯಂತೆ ಬೆಳೆದ ಲಕ್ಷ್ಮೀದೇವಿ (ಮಲ್ಲಿಕಾರವರು) ಯವರಿಗೆ ಅಗಾಧವಾದ ಪ್ರಕೃತಿ ಸೌಂದರ್ಯದ ನಡುವೆ, ಕಾಡುಮೇಡು, ಬೆಟ್ಟಗುಡ್ಡ, ಇಳಿಜಾರು ಕಣಿವೆಗಳು, ಹಚ್ಚ ಹಸಿರಿನ ಕಾಫಿ ತೋಟದಲ್ಲಿ ಸದಾ ಆಟ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅಷ್ಟಾಗಿ ಗಮನ ಕೊಡದಿದ್ದುದರಿಂದ ವ್ಯವಸ್ಥಿತವಾದ ಶಾಲಾ ಶಿಕ್ಷಣಕ್ಕೆ ಧಕ್ಕೆ. ಓದಿನ ಬಗ್ಗೆ ಆಸೆಯಿರದ ಲಕ್ಷ್ಮೀದೇವಿಗೆ ತಾನು ಓದುಬರಹ ಕಲಿಯಬೇಕೆನಿಸತೊಡಗಿದಾಗ ಮನೆಯಲ್ಲಿಯೇ ಅಕ್ಷರಾಭ್ಯಾಸ.

ಎಸ್ಟೇಟಿನಲ್ಲಿ ದುಡಿಯುತ್ತಿದ್ದವರೆಲ್ಲರೂ ಅನಕ್ಷರಸ್ಥರೆ. ಅಂಥವರ ಮಧ್ಯೆ ಅಕ್ಷರಸ್ಥ ಮೇಸ್ತ್ರಿಯೊಬ್ಬರು ಬಂದು, ಮಕ್ಕಳಿಗೆ ಪ್ರೈಮರಿಶಾಲೆಯಲ್ಲಿ ಕಲಿಸುವುದನ್ನೆಲ್ಲಾ ಕಲಿಸತೊಡಗಿದರು.

ಸರಿಯಾದ ರಸ್ತೆಗಳೇ ಇರದಿದ್ದ ಕಾಲದಲ್ಲಿ ಚಿಕ್ಕಮಗಳೂರಿಗೆ ಬೆಂಗಳೂರು ಬಹುದೂರ. ಚನ್ನೇಗೌಡರು ಬ್ರಿಗೇಡ್‌ ರಸ್ತೆಯಲ್ಲಿದ್ದ ಮೂರ್ನಾಲ್ಕು ಎಕರೆ ವಿಸ್ತೀರ್ಣದ ಮೋಟಾರು ರಿಪೇರಿ, ಮಾರಾಟದ ಕಂಪನಿಯನ್ನು ಖರೀದಿಸಿ ಇಡೀ ಸಂಸಾರ ಬೆಂಗಳೂರಿಗೆ ಬಂದು, ಹುಡುಗರನ್ನೂ ಸೇಂಟ್‌ ಜೋಸೆಫ್‌ ಶಾಲೆಗೆ ಸೇರಿಸಿದರು. ಆಗ ಮಲ್ಲಿಕಾರವರಿಗೆ ೯ ವರ್ಷ. ಶಾಲೆಯಲ್ಲಿ ಕನ್ನಡ ಪಠ್ಯವಿಲ್ಲದಿದ್ದುದರಿಂದ ಮನೆಯಲ್ಲಿ ಪ್ರಾರಂಭಿಸಿದ ಕನ್ನಡದ ಪಾಠ. ಹುಡುಗರ ಜೊತೆ ಉಳಿದ ಹುಡುಗಿಯರಿಗೂ ಸುಂದರಯ್ಯ ಮಾಸ್ತರಿಂದ ಕನ್ನಡ ಕಲಿಕೆ. ಹೀಗೆ ಮಲ್ಲಿಕಾರವರು ಓದಿದ್ದು ಏಳನೆಯ ತರಗತಿಯವರೆಗೆ. ಸ್ವಯಂ ಶಿಕ್ಷಣಾರ್ಥಿಯಾಗಿ ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಪಡೆದ ಪರಿಣತಿ.

ಇವರ ಜೊತೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳೂ ಕರಕುಶಲ ಕಲೆಯಲ್ಲಿ ಪ್ರಖ್ಯಾತರೆ. ಮನೆಯಲ್ಲಿ ಕುಳಿತಿದ್ದರೂ ಟೈಲರಿಂಗ್‌, ಕಸೂತಿ, ಸ್ವೆಟರ್ ಹೆಣಿಕೆ, ಎಂಬ್ರಾಯಿಡರಿ, ಬಳೆಯಲ್ಲಿ ಬುಟ್ಟಿ ತಯಾರಿಕೆ, ಕೈಚೀಲಗಳು, ದಿಂಬಿನ ಚೀಲಗಳಿಗೆ ದಾರದ ಕಸೂತಿ ಕೆಲಸ ಮುಂತಾದವುಗಳಲ್ಲಿ ಕುಶಲತೆ ಉಳ್ಳವರು.

ವಿಶಾಲವಾದ ಸ್ಥಳದ ಮಧ್ಯೆ ಬಂಗಲೆಯಿದ್ದು ಕಾರು ಗ್ಯಾರೇಜ್‌ ಕೂಡಾ ಪಕ್ಕದಲ್ಲೇ ಇದ್ದು ರಿಪೇರಿಗಾಗಿ ಲೇತುಗಳ ವಿಭಾಗ, ಮರಗೆಲಸ, ಪೇಯಿಂಟಿಂಗ್‌ ವಿಭಾಗ, ಬ್ಯಾಟರಿ ವಿಭಾಗ ಹೀಗೆ ಎಲ್ಲದರಲ್ಲೂ ಹಲವಾರು ಜನ ಕೆಲಸಗಾರರು ಹಗಲಿರುಳು ದುಡಿಯುತ್ತಿದ್ದು, ಸದಾ ಒತ್ತಡದ ಸ್ಥಿತಿಯಲ್ಲೇ ಕೆಲಸ ನಡೆಯುತ್ತಿದ್ದ ಗ್ಯಾರೇಜ್‌ಗೆ ಎರಡನೆಯ ಮಹಾಯುದ್ಧದ ಬಿಸಿತಟ್ಟಿ, ಬಿಡಿಭಾಗಗಳನ್ನು ಆಮದುಮಾಡಿಕೊಳ್ಳುವಲ್ಲಿ ತೊಂದರೆ ಉಂಟಾಗಿ ಕಡೆಗೆ ಗ್ಯಾರೇಜನ್ನೂ ಮುಚ್ಚುವ ಸ್ಥಿತಿ ಬಂದು ಇಡೀ ಸಂಸಾರ ಹಿಂದಿರುಗಿದ್ದು ಅತ್ತಿಗೊಂಡ ಎಸ್ಟೇಟಿಗೆ. ಅಷ್ಟರಲ್ಲಾಗಲೇ ದಾಯಾದಿಗಳು ತೋಟದ ಕೆಲ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದು, ಉಳಿದದ್ದಷ್ಟೇ ಇವರ ಪಾಲಿಗೆ ಬಂದುದು.

ತಾಯಿಗೆ ಪುರಾಣ ಪುಣ್ಯ ಕಥೆಗಳಲ್ಲಿ ಆಸಕ್ತಿಯಿದ್ದು ಹೆಣ್ಣುಮಕ್ಕಳಿಂದ ಓದಿಸಿ ಕೇಳುತ್ತಿದ್ದ ರಾಮಾಯಣ, ಮಹಾಭಾರತ, ಭಾಗವತ ಕಥೆಗಳನ್ನು ಇವರೂ ಕೇಳತೊಡಗಿದರು. ಜೊತೆಗೆ ಬೆಂಗಳೂರಿನಲ್ಲಿದ್ದಾಗ ಮನೆಕೆಲಸದವಳು ಹೇಳುತ್ತಿದ್ದ ರಂಜನೀಯವಾದ ಕಥೆಗಳಿಗೂ ಮಾರು ಹೋಗಿದ್ದರು. ಅತ್ತಿಗೊಂಡ ಎಸ್ಟೇಟಿಗೆ ಹಿಂದಿರುಗಿ ಬಂದನಂತರ ಕೆಲಸದವರು ಹೇಳುತ್ತಿದ್ದ ಜನಪದಕಥೆಗಳು, ಹಾಡುಗಳನ್ನು ಕೇಳಿ ಪ್ರಭಾವಿತರಾದರು. ಆಲೋಚನಾಶಕ್ತಿ, ವಿಚಾರಶಕ್ತಿ ಬೆಳೆಯುತ್ತಾ ಬಂದಂತೆಲ್ಲ ಸಾಹಿತ್ಯದ ಕಡೆ ಅಭಿರುಚಿ ಬೆಳೆಯತೊಡಗಿ ತಾವೂ ಏಕೆ ಬರೆಯ ಬಾರದು ಎನಿಸಿದಾಗ ಬರೆದ ಮೊದಲ ಕತೆ ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಇವರಿಗಾದ ಆನಂದ ಅಷ್ಟಿಷ್ಟಲ್ಲ. ಸರಸ್ವತಿಯ ಕೃಪೆ ಒಲಿದು ಬಂದಿದೆ ಎಂದು ತಿಳಿದು ಬರೆದದ್ದನ್ನೆಲ್ಲಾ ಇತರ ಪತ್ರಿಕೆಗಳಿಗೂ ಕಳುಹಿಸತೊಡಗಿದರು. ಕೆಲ ಪದ್ಯಗಳೂ ಪ್ರಕಟಗೊಂಡವು.

ಈಗ ಮನಸ್ಸಿನಲ್ಲಿ ಸಂಪೂರ್ಣವಾಗಿ ಸಾಹಿತ್ಯವೇ ತುಂಬಿಕೊಂಡು ನಿಂತರೆ ಕುಳಿತರೆ, ಎಸ್ಟೇಟಿನಲ್ಲಿ ಓಡಾಡುತ್ತಿದ್ದರೆ ಸಾಹಿತ್ಯದ ಆಲೋಚನೆಯೆ. ಆದರೆ ತಾಯಿಗೆ ಮಗಳ ಮದುವೆಯ ಯೋಚನೆ. ಕಡಿದಾಳ್‌ ಮಂಜಪ್ಪನವರೊಡನೆ ಮದುವೆ ನಡೆದು ಗಂಡನ ಮನೆ ತಲುಪಿದರು. ಅಲ್ಲೋಬಿಡುವಿಲ್ಲದ ಕೆಲಸ ರಾಜಕೀಯ ವ್ಯಕ್ತಿಯಾದ್ದರಿಂದ ಸದಾ ರಾಜಕೀಯ ಗೆಳೆಯರ, ವಾರಾನ್ನದ ವಿದ್ಯಾರ್ಥಿಗಳ, ಇಲ್ಲೇ ವಸತಿ ಹೂಡಿರುವ ವಿದ್ಯಾರ್ಥಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಳ್ಳಿಯಿಂದ ಬಂದವರ, ಬಂಧುಗಳಿಂದ ಮನೆಯಲ್ಲಿ ಸದಾ ಗಜಿಬಿಜಿ.

ಅರ್ಧ ಆಯುಸ್ಸು ಹೀಗೇ ಕಳೆದು ಹೋದರೂ ಬತ್ತದ ಸಾಹಿತ್ಯದ ಸೆಲೆ ಚಿಗುರೊಡೆದಿದ್ದು ನಲವತ್ತರ ನಂತರವೇ. ಎಂ.ಕೆ. ಇಂದಿರಾರವರಂತೆ ಮಧ್ಯ ವಯಸ್ಸು ದಾಟಿನ ನಂತರವೇ ಬರೆದ ಮೊದಲ ಕಾದಮಬರಿ ‘ಜೀವನ ಗಂಗಾ’. ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಬಂದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಆಶಯದಿಂದ ಬೆಳಗಿನ ಜಾವಕ್ಕೆ ಎದ್ದು ವ್ರತದಂಥೆ, ಸಾಂಸಾರಿಕ ಜಂಜಡಗಳ ನಡುವೆಯೂ ಹಗಲು-ರಾತ್ರಿ ಬರೆಯತೊಡಗಿದರು. ಹೀಗೆ ಸಾಹಿತ್ಯ ಯಾತ್ರೆಯನ್ನು ಸಾಹಸಯಾತ್ರೆಯಾಗಿ ಸ್ವೀಕರಿಸಿ ಬರೆದ ಕಾದಂಬರಿಗಳು ಡಾ. ಅಘೋರ, ಡಾ. ಕಮಲೇಶ್‌, ವಂದೇಮಾತರಂ (ರಾಜಕೀಯ ವಸ್ತುವಾಗುಳ್ಳ ಕಾದಂಬರಿ), ಅನಂತಾನಂತದೆಡೆಗೆ, ಮನೋನ್ಮಣಿ, ಮುಂತಾದ ಹನ್ನೊಂದು ಕಾದಂಬರಿಗಳು-

ಬಹುರತ್ನಾ ವಸುಂಧರಾ, ರತ್ನಗರ್ಭವಸುಂಧರಾ, ಸುಧಾಮಣಿ, ರಮಣೀಮಣಿ, ಲಿಯೋನ, ಶ್ರೀಮುಖ ಮೊದಲಾದ ಹನ್ನೊಂದು ಕಥಾಸಂಕಲನಗಳು-
ಪೂಜಾವಸಾನ ಸಮಯೆ!, ಧ್ಯಾನಾವಸಾನಸಮಯೋ!, ಗಗನಕುಸುಮ, ಜೀವನಕುಸುಮ ಮೊದಲಾದ ೧೫ ಕವಿತಾ ಸಂಕಲನಗಳು-

ಮಂಗಳಭಾರತ, ಕಲ್ಯಾಣಭಾರತಿ, ಉತ್ತರೋತ್ತರಣ’, ರಾಗಾನುರಾಗಿಣಿ, ಪ್ರಪುಲ್ಲಭಾರತ ಮೊದಲಾದ ೫ ಸಂಜೀವನ ಕಾವ್ಯಗಳು-

ಪುಣ್ಯಾಭಿಸಾರ, ಪುಣ್ಯ ಪಯೋನಿಧಿ ಮೊದಲಾದ ಎರಡು ಪೌರಾಣಿಕ ನಾಟಕಗಳು;

ತರಂಗಿಣಿ-ಸಾನೆಟ್‌ಗಳು; ಐಂದ್ರಕೀರ್ತಿ ಕೇತನಂ ಎಂಬ ಗದ್ಯ ಕಾವ್ಯವಲ್ಲದೆ ಶಿಶುಸಾಹಿತ್ಯಕ್ಕೂ ಇವರ ಕೊಡುಗೆ ದೊಡ್ಡದೆ.

ದೂರದೇಶದಲ್ಲಿ, ಬೆಳದಿಂಗಳ ರಾತ್ರಿ, ರಂಗಸಾಹಸ, ಓಹಿಯೋಜ ಸರೋವರ ಮೊದಲಾದ ೭ ಶಿಶು ಸಾಹಿತ್ಯ ಕೃತಿಗಳಲ್ಲದೆ ಇವರು ರಚಿಸಿದ ಮಹಾಕಾವ್ಯ ‘ಶ್ರೀ ವಿವೇಕಾನಂದ ವಿಜಯಂ’. ಹೀಗೆ ಲೇಖಕಿಯರಲ್ಲಿ ಮಹಾಕಾವ್ಯ ರಚಿಸಿದವರಲ್ಲಿ ಮೊದಲನೆಯವರು ಜಯದೇವಿ ತಾಯಿ ಲಿಗಾಡೆ ಎರಡನೆಯವರು.

ತಮ್ಮ ೭೩ ರ ಹರೆಯದಲ್ಲಿ ತಪಸ್ಸಿನಂತೆ ಕುಳಿತು ರಚಿಸಿದ ಕೃತಿ ಯಲ್ಲಿ ೪೨ ಆಶ್ವಾಸಗಳ ೨೭೩೨೦ ಸಾಲುಗಳ, ೧೨೭೫ ಪುಟಗಳ ಮಹಾಕಾವ್ಯವನ್ನು ರಚಿಸಲು ಐದು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇದು ಪ್ರಕಟವಾದುದು ೧೯೯೮ ರಲ್ಲಿ ಹೀಗೆ ಇವರು ರಚಿಸಿದ ಒಟ್ಟು ಸಾಹಿತ್ಯ ಕೃತಿಗಳ ಸಂಖ್ಯೆ ೫೫. ಲಕ್ಷ್ಮೀ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನೂ ಹುಟ್ಟುಹಾಕಿ ಪ್ರಕಟಣಾ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿದ ಲೇಖಕಿ.

ಮುಖ್ಯಮಂತ್ರಿಗಳ ಮಡದಿಯಾಗಿ ಸಾಂಸಾರಿಕ ಜೀವನದಲ್ಲಿ ಕಳೆದುಹೋಗಿ ಬಿಡಬಹುದಾಗಿದ್ದ ಮಲ್ಲಿಕಾರವರಲ್ಲಿ ಸಾಹಿತ್ಯದ ಸೆಲೆ ಚಿಗುರೊಡೆದು ಮಧ್ಯವಯಸ್ಸು ದಾಟಿದ ನಂತರ ಸಾಹಿತ್ಯ ಸೇವೆಯನ್ನು ಕೈಗೊಂಡು ಅಗಾಧ ಸಾಧನೆಮಾಡಿದ ಮಲ್ಲಿಕಾರವರಿಗೆ ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆಪ್ರಶಸ್ತಿ (೧೯೯೯), ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜದೇವಿ ಪ್ರಶಸ್ತಿ (೧೯೯೯), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭) ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.

Monday 6 February 2012

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ

ಫೆಬ್ರವರಿ 7, 1926ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದಾರೆ. ಪ್ರವಾಸ ಪ್ರೀತಿಯ ಜೀಯೆಸ್ಸೆಸ್ ಈ ಸುತ್ತುವಿಕೆಯಿಂದ ಬಹುಶ್ರುತತೆಯನ್ನು, ಸಮಚಿತ್ತವನ್ನು, ಜನಸಂಪರ್ಕವನ್ನು ಪಡೆದಿದ್ದಾರೆ. ಸೃಜನ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ತಮ್ಮ ಕೊಡುಗೆ ನೀಡುತ್ತ ಬಂದ ಮುಖ್ಯರಲ್ಲಿ ಒಬ್ಬರಾಗಿದ್ದಾರೆ. ಡಾ. ಜಿ. ಎಸ್. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾಗಿ ನಮ್ಮ ಕನ್ನಡಿಗರ ಹೆಮ್ಮೆಯಾಗಿದ್ದಾರೆ. 

ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ, ದೂರ ದೂರದ ಹಳ್ಳಿಗಾಡುಗಳಲ್ಲಿ ಓದಿನ ಸೌಲಭ್ಯಗಳಿಗಾಗಿ ನಿಧಾನವಾಗಿ ತೆರೆದುಕೊಳ್ಳುತ್ತಿದ್ದ ಜನಸಮುದಾಯದಿಂದ ಬಂದು ಶ್ರಮ, ನಿಷ್ಠೆ, ಹಾಗೂ ಪ್ರತಿಭೆಗಳಿಂದ ರಂಗದಲ್ಲಿ ಮುಖ್ಯರಾಗತೊಡಗಿದ್ದ, ಹಾಗೆ ತೊಡಗಿ ಯಶಸ್ಸು ಪಡೆದ ಮೊದಲ ತಲೆಮಾರಿಗೆ ಜೀಯೆಸ್ಸೆಸ್ ಸೇರುತ್ತಾರೆ. ಕನ್ನಡ ನವೋದಯದ ಮುಂದಾಳುಗಳು ರೂಪಿಸಿದ ಹಾದಿಯಲ್ಲಿ ನಡೆದು ಸಮರ್ಥ ಉತ್ತರಾಧಿಕಾರಿಗಳು ಎಂದು ಸಾಬೀತು ಮಾಡಿದ್ದಾರೆ.

ಶಿಕ್ಷಕ ತಂದೆಯೊಡನೆ ಸುತ್ತುತ್ತ ಊರೂರುಗಳಲ್ಲಿ ಶಿಕ್ಷಣ ಪಡೆದು ಮೈಸೂರು ಸೇರಿ ವೆಂಕಣ್ಣಯ್ಯ, ಕುವೆಂಪು ಅವರ ಒತ್ತಾಸೆಯಲ್ಲಿ ಬಿ.ಎ (ಆನರ್ಸ್), ಎಂ.ಎ ಹಾಗೂ ಪಿ.ಎಚ್.ಡಿ ಗಳನ್ನು ಪಡೆದರು. ಮಹಾರಾಜ ಕಾಲೇಜು ಆಗ ಟಂಕಸಾಲೆ. ಅಲ್ಲಿ ಪ್ರಮಾಣೀಕರಣಗೊಂಡರೆ ಮಾತ್ರ ಸಾಹಿತ್ಯಕ ವ್ಯಕ್ತಿತ್ವಕ್ಕೆ ಚಲಾವಣೆ ಸಿಗುವಂತೆ ಇದ್ದ ಕಾಲ. ವಿಶ್ವವಿದ್ಯಾಲಯದ ಹೊರಗಿದ್ದವರೂ ಒಂದಲ್ಲ ಒಂದು ಬಗೆಯಲ್ಲಿ ಈ ಟಂಕಸಾಲೆಯ ವ್ಯಾಪ್ತಿಯ ಒಳಗಾಗಿಯೇ ಇದ್ದರೆಂಬುದಕ್ಕೆ ಪ್ರಬುದ್ಧ ಕರ್ನಾಟಕ ಹಾಗೂ ಮಹಾರಾಜ ಕಾಲೇಜು ಕರ್ನಾಟಕ ಸಂಘ ಪ್ರಕಟಿಸಿದ ಗ್ರಂಥಗಳ ಪುಟಗಳು ಸಾಕ್ಷಿಯಾಗಿವೆ. ಜೀಯೇಸ್ಸೆಸ್ ಅಲ್ಲಿ ಕವಿಯಾಗುವ ಹಂಬಲಕ್ಕೆ ಪುಷ್ಟಿ ಪಡೆದರು. ಮಾಸ್ತಿಯವರು ‘ಜೀವನ’ದಲ್ಲಿ ಈ ಕವಿಯನ್ನು ಮೊದಲು ಅನಾವರಣಗೊಳಿಸಿದರಾದರೂ ಜೀಯೆಸ್ಸೆಸ್ ಹಸಿರು ಬಾವುಟ ಕಂಡದ್ದು ಕುವೆಂಪು ಅವರಲ್ಲಿ. ಈ ಮಹಾರಾಜ ಕಾಲೇಜು ಇವರೊಳಗಿನ ವಿಮರ್ಶಕ ಮೀಮಾಂಸಕರನ್ನೂ ಬೆಳೆಸಿತು.

ಜೀಯೆಸ್ಸೆಸ್ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ (ದಾವಣಗೆರೆ, ಶಿವಮೊಗ್ಗೆ, ಮೈಸೂರು) ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯರಾಗಿ ಕೆಲಸಮಾಡಿ, ಮರಳಿ ಮಹಾರಾಜಾ ಕಾಲೇಜಿಗೆ ಬಂದು, ಅನಂತರ (1966) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, 1970ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯರಾದರು. ಇಲ್ಲಿ ಎರಡು ದಶಕಗಳ ಕಾಲ ಕಾವ್ಯ, ಕಾವ್ಯಮೀಮಾಂಸೆಗಳ ಪಾಠ ಹೇಳಿದ್ದಾರೆ. ಕನ್ನಡದ ಅತಿ ಪ್ರಭಾವಶಾಲಿ ಅಧ್ಯಾಪಕರ ಪರಂಪರೆಗೆ ಜೀಯೆಸ್ಸೆಸ್ ಸೇರುತ್ತಾರೆ. ಪ್ರಾಚೀನ ಹಾಗೂ ಆಧುನಿಕ ಕನ್ನಡ ಕಾವ್ಯ, ಇಂಗ್ಲಿಷ್ ರೋಮಾಂಟಿಕ್ ಕಾವ್ಯ, ಐರೋಪ್ಯ ನವ್ಯಕಾವ್ಯ, ಪಾಶ್ಚಾತ್ಯ ಮಹಾಕಾವ್ಯ ಹಾಗೂ ತೌಲನಿಕ ಕಾವ್ಯ ಮೀಮಾಂಸೆ – ಇವು ಅವರು ಪಾಠ ಹೇಳಿದ ಮುಖ್ಯ ವಲಯಗಳು. ಎಲ್ಲ ಕಾಲದ, ಎಲ್ಲ ದೇಶದ ಕವಿಗಳನ್ನು ಕನ್ನಡದ ಸಂವೇದನೆಯ ಮೂಲಕವೇ ಗ್ರಹಿಸಬಯಸುವ, ಪರೋಕ್ಷವಾಗಿ ಒಂದು ಬಗೆಯ ಶುದ್ಧ ಕಾವ್ಯವನ್ನು ಹುಡುಕುವ ವಿಧಾನವನ್ನು ಬಳಸಿದರು. ಅವರ ಪಾಠಗಳು ಪೂರ್ವಸಿದ್ಧತೆ, ವಿವರಗಳ ಮಂಡನೆ, ಚಿಂತನಶೀಲತೆ, ಸಾಮಯಿಕ ಒಳನೋಟಗಳನ್ನು ಒಳಗೊಂಡಿರುವುದರ ಜೊತೆಗೆ ಹೊಸದನ್ನು ಅಳವಡಿಸಿಕೊಳ್ಳುವ, ಹೊಸದಾದುದಕ್ಕೆ ಪ್ರತಿಕ್ರಯಿಸುವ ಆಸಕ್ತಿಯಿಂದ ಕೂಡಿರುತ್ತಿದ್ದವು. ಅವರ ಪಾಠಗಳು ಅವರ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿ ಮೊಳೆತು ಬೆಳೆದಿವೆಯಾಗಿ, ಜೀಯೆಸ್ಸೆಸ್ ಪರೋಕ್ಷವಾಗಿ ತರಗತಿಯ ಹೊರಗೂ ಮೇಷ್ಟರಾಗಿದ್ದಾರೆ. ಅವರ ಹಲವಾರು ಶಿಷ್ಯರು ಕನ್ನಡ ವಿಮರ್ಶೆ ಮತ್ತು ಸಾಹಿತ್ಯಾಧ್ಯಯನದ ಕ್ಷೇತ್ರದ ಕೃಷಿಯಲ್ಲಿ ತೊಡಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತ್ಯ ಸಂಬಂಧದ ಚಟುವಟಿಕೆಗಳನ್ನು ಸಂಯೋಜಿಸಿ, ಸಂಘಟಿಸಿ, ನಿರ್ವಹಿಸಿ ಜೀಯೆಸ್ಸೆಸ್ ಹೆಸರಾಗಿದ್ದಾರೆ. ಕನ್ನಡ ವಿಮರ್ಶೆಯ ಬೆಳವಣಿಗೆಗೆ ಅವರು ಹಾಕಿಕೊಂಡ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದ್ದಾರೆ. ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ಮತ್ತು ‘ಸಾಹಿತ್ಯ ವಾರ್ಷಿಕ’ದ ಯೋಜನೆಗಳು ಅನನ್ಯವಾದವು. ಸಾಂಸ್ಥಿಕ ಪ್ರಯತ್ನದ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ವಿವಿಧ ಚಿಂತನಾಕ್ರಮಗಳ ಮೇಳವನ್ನು ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯು ಸಾಧಿಸಿದರೆ, ‘ಸಾಹಿತ್ಯ ವಾರ್ಷಿಕ’ ದಾಖಲೆಯ ಜೊತೆಗೆ ವಿಮರ್ಶೆಯ ಬೆಳವಣಿಗೆಯ ದಿಕ್ಕನ್ನು ಕೂಡ ಸಾಧಿಸಲು ಸಮರ್ಥವಾಗಿದೆ. ಇಂಥ ಪ್ರಯತ್ನಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಜೀಯೆಸ್ಸೆಸ್ ಮುಂದುವರೆಸಿ ಯಶಸ್ಸು ಸಾಧಿಸಿದ್ದರು.

ಜೀಯೆಸ್ಸೆಸ್ ಅವರು ಕನ್ನಡ ಸಾಹಿತ್ಯ ಪಂಡಿತರಿಗೆ, ಸಾಹಿತ್ಯ ಚಿಂತಕರಿಗೆ, ಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋ, ಜನಸಾಮಾನ್ಯರಿಗೆ ಕೂಡ ಬಲುಪ್ರಿಯರು. ಅವರ ಭಾವಗೀತೆಗಳು ಹಲವಾರು ಪ್ರಮುಖ ಹಾಡುಗಾರರ, ಜನಸಾಮಾನ್ಯರ ಧ್ವನಿಗಳಲ್ಲಿ ಹಲವಾರು ದಶಕಗಳಿಂದ ನಲಿಯುತ್ತ ಸಾಗಿದೆ. ‘ಎದೆ ತುಂಬಿ ಹಾಡಿದೆನು ಅಂದು ನಾನು’ ಹಾಡನ್ನು ಅನುಭಾವಿಸದ ಕನ್ನಡಿಗನೇ ಇಲ್ಲ. ಎಲ್ಲ ಮಾದರಿಯ ಕವಿತೆಗಳಲ್ಲಿ, ಹಾಡುಗಳಲ್ಲಿ ಅದು ನಿರಂತರವಾಗಿ ಜನರ ನಾಲಿಗೆಯಲ್ಲಿ, ಜನಮಾನಸದಲ್ಲಿ ಬೆಳಗುತ್ತಿದೆ. ‘ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, ‘ಯಾರವರು ಯಾರವರು ಯಾರವರು ಯಾರೋ’, ‘ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ’, ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು’, ‘ಹಾಡು ಹಳೆಯದಾದರೇನು’, ‘ಯಾವುದೀ ಪ್ರವಾಹವೂ’, 'ಬೆಳಗು ಬಾ ಹಣತೆಯನು', 'ನೀನು ಮುಗಿಲು ನಾನು ನೆಲ' ಹೀಗೆ ಅವರ ಭಾವಗೀತೆಗಳನ್ನು ಒಂದಾದ ಮೇಲೆ ಒಂದು ನೆನಪಿಸಿಕೊಳ್ಳುತ್ತಲೇ ಇರಬೇಕು ಎಂದೆನಿಸುತ್ತದೆ ಮಾತ್ರವಲ್ಲ ಆ ನೆನಪೇ ಒಂದು ಸವಿ ಪಯಣದ ಮೆಲುಕಿನಂತಿರುತ್ತದೆ. ಜೀಯೆಸ್ಸೆಸ್ ಕನ್ನಡಪರ ಚಳುವಳಿಗಳಲ್ಲಿ, ಖಾಳಜಿಗಳಲ್ಲಿ ಕೂಡಾ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದವರು.


ಕನ್ನಡದ ಮುಖ್ಯಕವಿಗಳಾಗಿ ಜೀಯೆಸ್ಸೆಸ್ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಾವ್ಯರಚನೆ ಮಾಡಿದ್ದಾರೆ. ಕುವೆಂಪು ಮತ್ತು ಪು.ತಿ.ನ ಅವರ ಕಾವ್ಯರಚನೆಗಳಿಂದ ಬೇರೆ ಬೇರೆ ಬಗೆಯಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಪ್ರಭಾವಿತರಾಗಿ ಕವಿತೆಗಳನ್ನು ಬರೆಯತೊಡಗಿದ ಜೀಯೆಸ್ಸೆಸ್ ಮುಂದಿನ ಕನ್ನಡ ಕಾವ್ಯದ ಬೆಳವಣಿಗೆಯಲ್ಲಿ ಬೆರೆಯುತ್ತ ಬೆಳೆದರು. ನವೋದಯ, ನವ್ಯ, ಬಂಡಾಯಗಳೆಂಬ ಮಾರ್ಗಗಳು ಅವರ ಕಾವ್ಯರಚನೆಯನ್ನು ಪ್ರಭಾವಿಸಿವೆ. ಇವುಗಳ ಪ್ರಭಾವ ಏನೇ ಇದ್ದರೂ, ಜೀಯೆಸ್ಸೆಸ್ ಅವರ ಮುಖ್ಯ ಕವಿತೆಗಳಲ್ಲಿ ತುಂಬಿರುವುದು ಪ್ರಸಾದ ಗುಣ. ಇವರ ಕವನ ಸಮುದಾಯದ ಅಧಿಕತಮ ಕವಿತೆಗಳ ಸಾಧಾರಣ ಧರ್ಮವನ್ನು ಗಮನಿಸಿದರೆ ಕವಿ, ಕಾವ್ಯಶರೀರವನ್ನು, ಪದಸಂಯೋಜನೆಯನ್ನು, ಅರ್ಥವು ಓದುಗನಿಗೆ ಸಂವಹನಗೊಳಿಸುವ ಪಾರದರ್ಶಕ ಮಾಧ್ಯಮವನ್ನಾಗಿ ಬಳಸುತ್ತಿರುವುದು ಸ್ಪಷ್ಟಗೊಳ್ಳುತ್ತದೆ. ಕಾವ್ಯಶರೀರ ‘ಅರ್ಥ’ವನ್ನು ಮುಚ್ಚಿಡಲು ರೂಪುಗೊಂಡುದಲ್ಲ. ಹಾಗೆಯೇ ‘ಅರ್ಥ’ವನ್ನು ಗ್ರಹಿಸಿಕೊಳ್ಳಲೆಂದೇ ಕಾವ್ಯ ಶರೀರವನ್ನು ರೂಪಿಸುವ ನವ್ಯಕವಿಗಳ ಮಾದರಿಯೂ ಇವರದ್ದಲ್ಲ. ಕವಿ ತನ್ನ ಅನುಭವಕ್ಕೆ ದಕ್ಕಿದ ಭಾವಾರ್ಥಗಳನ್ನು ಭಾಷಿಕವಾಗಿ ಮಂಡಿಸುತ್ತಾರೆ; ಹೀಗಾಗಿ ಇದೊಂದು ಬಗೆಯ ಧ್ಯಾನಿತ ಕಾವ್ಯ. ಹಾಗಾಗಿ ಕವಿ ಅನುಭವದ ಗ್ರಹಿಕೆಗೆ ಕಾವ್ಯ ಬಿಡುಗಡೆಯ ಮಾಧ್ಯಮವಾಗುತ್ತದೆ. 

‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ತೆರೆದ ಬಾಗಿಲು’, ‘ಗೋಡೆ’, ‘ವ್ಯಕ್ತಮಧ್ಯ’, ‘ತೀರ್ಥವಾಣಿ’, ‘ಕಾರ್ತಿಕ’, ಕಾಡಿನ ಕತ್ತಲಲ್ಲಿ’, ‘ಪ್ರೀತಿ ಇಲ್ಲದ ಮೇಲೆ’, ‘ಚಕ್ರಗತಿ’ ಅವರ ಪ್ರಮುಖ ಕವನ ಸಂಕಲನಗಳು. ಜೀಯೆಸ್ಸೆಸ್ ತಮ್ಮ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸುವ ಹೊಣೆ ಹೊರಲು ಸಿದ್ಧರಾಗುವುದು ಕಂಡುಬರುತ್ತದೆ. ಒಂದು ಜೀವಸಂಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ಸಮಾಜ. ವಿಸ್ಮಯ ಉತ್ಸುಕತೆಗಳು ಅವರ ಕವಿತೆಗಳ ಪ್ರಧಾನ ಭಾವಗಳಾಗುತ್ತವೆ. ಪ್ರಕೃತಿಯ ನಿಯತ ಲಯಗಳು ಕವಿಗೆ ಸದಾ ಆಕರ್ಷಣೆಯನ್ನು ಉಂಟುಮಾಡಿವೆ. ಇನ್ನೊಂದು ನೆಲೆಯಲ್ಲಿ ನಿರೂಪಕ ಸಾಮಾಜಿಕ ಹೊಣೆಗಾರಿಕೆಯನ್ನು ಪಡೆದುಕೊಳ್ಳುತ್ತಾನೆ. ಆವರಣದ ಮಾನವ ಜಗತ್ತಿನ ವೈಸಾದೃಶ್ಯಗಳನ್ನು, ಲಯರಾಹಿತ್ಯವನ್ನು, ಅಪಶ್ರುತಿಗಳನ್ನು ಗ್ರಹಿಸಿ ಅವುಗಳನ್ನು ತನ್ನ ಕವಿತೆಗಳಲ್ಲಿ ಮಂಡಿಸುವುದು ಈ ನಿರೂಪಕನ ಹೊಣೆ. 

‘ಕಾಲ’ ಮತ್ತು ‘ಮನುಷ್ಯ’ ತಮ್ಮ ಕಾವ್ಯದ ಕೇಂದ್ರಗಳು ಎಂದು ಜೀಯೆಸ್ಸೆಸ್ ಹೇಳಿರುವುದುಂಟು. ನಿರಂತರವಾದದ್ದು ಹಾಗೂ ಅದರ ಒಂದು ಘಟಕದಲ್ಲಿ ನಿಜವಾಗವಂಥದ್ದು ಇವೆರಡೂ, ಅತೀತವಾದದ್ದು ಅನ್ಯವಲ್ಲ, ಅದು ಲೋಕವೇ ಎಂಬ ನೆಲೆಯಲ್ಲಿರುವ ಇವರ ಕಾವ್ಯ ಲೋಕಪ್ರೀತಿಯದು.

‘ಪರಿಶೀಲನದಿಂದ’ ಮೊದಲಾಗಿ ‘ಗತಿಬಿಂಬ’, ‘ನವೋದಯ’, ‘ಅನುರಣನ’, ‘ಪ್ರತಿಕ್ರಿಯೆ’, ಮತ್ತು ‘ಬೆಡಗು’ ವರೆಗಿನ ಅವರ ವಿಮರ್ಶೆಯ ಸಂಕಲನಗಳು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಾಹಿತ್ಯ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತವೆ. ಕನ್ನಡ ನವೋದಯ ವಿಮರ್ಶೆಯ ವಿಚಾರಮೂಲವಾದಿ ಆಕೃತಿಗಳನ್ನು ಇಡಿಯಾಗಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನ ಕಾವ್ಯಕ್ಕೆ ಸಮರ್ಥವಾಗಿ ಅನ್ವಯಿಸುವ ಜೀಯೆಸ್ಸೆಸ್ ಅವರ ‘ಸೌಂದರ್ಯ ಸಮೀಕ್ಷೆ’ ಮಹಾಪ್ರಬಂಧ ಅವರ ವಿಮರ್ಶಾ ಪ್ರಯತ್ನದ ಪ್ರಮುಖ ಹಂತ. ಅವರ ‘ಸೌಂದರ್ಯ ಸಮೀಕ್ಷೆ’ಯಲ್ಲಿ ಕಾವ್ಯಗಳಲ್ಲಿ, ಕೃತಿಭಾಗಗಳಲ್ಲಿ ಕಂಡು ಬರುವ ‘ಲೋಕಾನುಭವ ಪರಿವರ್ತನೆ’ಯನ್ನು ವ್ಯಾಖ್ಯಾನಿಸುವ ಬಗೆ ಸಾಹಿತ್ಯಾಭ್ಯಾಸಿಗಳಿಗೆ ಈಗಲೂ ಸಾಹಿತ್ಯಾಧ್ಯಯನಕ್ಕೆ ಪ್ರವೇಶವನ್ನು, ಸಾಹಿತ್ಯಾಭಿರುಚಿಗೆ ಮಾದರಿಯನ್ನು ಒದಗಿಸಬಲ್ಲದು. ತಾತ್ವಿಕವಾಗಿ ಕನ್ನಡ ಕಾವ್ಯಪರಂಪರೆಯನ್ನು ವ್ಯಾಖ್ಯಾನಿಸುವ ಅವರ ಇನ್ನೆರಡು ಪ್ರಯತ್ನಗಳೆಂದರೆ ‘ಕನ್ನಡ ಸಾಹಿತ್ಯ ಸಮೀಕ್ಷೆ’ ಮತ್ತು ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’. ಕನ್ನಡ ಸಾಹಿತ್ಯ ಮೀಮಾಂಸೆಯ ಚೌಕಟ್ಟನ್ನು ರಚಿಸಲು ಬೇಕಾದ ಮೂಲಭೂತ ಅಂಶಗಳು ಈ ಕೃತಿಗಳಲ್ಲಿ ಚರ್ಚಿತವಾಗಿವೆ. 

‘ಮಹಾಕಾವ್ಯ ಸಮೀಕ್ಷೆ’ ಗ್ರಂಥದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಮಹಾಕಾವ್ಯ ಸಂಬಂಧ ತತ್ತ್ವಗಳನ್ನು ತೌಲನಿಕವಾಗಿ ವಿವೇಚಿಸಲಾಗಿದೆ. ಇಂಥ ಹೋಲಿಕೆಯ ಅಧ್ಯಯನವನ್ನು ಸಾಹಿತ್ಯ ತತ್ವಗಳ, ತಾತ್ತ್ವಿಕ ಪರಿಕಲ್ಪನೆಗಳ ನೆಲೆಯಲ್ಲಿ ಬಳಸಿ ಬರೆದ ಲೇಖನಗಳ ಸಂಕಲನ, ‘ಕಾವ್ಯಾರ್ಥ ಚಿಂತನ’. ಜೀಯೆಸ್ಸೆಸ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಂದು ಕೊಟ್ಟ ಕೃತಿ ಇದು. 

ಇಷ್ಟೆಲ್ಲಾ ಬರಹಗಳ ನಡುವೆ ಜೀಯೆಸ್ಸೆಸ್ ಮೂರು ಪ್ರವಾಸ ಕಥನಗಳನ್ನು (ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ, ಗಂಗೆಯ ಶಿಖರಗಳಲ್ಲಿ ಮತ್ತು ಅಮೆರಿಕದಲ್ಲಿ ಕನ್ನಡಿಗ), ಒಂದು ಜೀವನಚಿತ್ರವನ್ನು (ಕರ್ಮಯೋಗಿ) ಹಾಗೂ ಆತ್ಮಕಥನ ಭಾಗವನ್ನು (ಚತುರಂಗ) ಬರೆದಿದ್ದಾರೆ. ಪ್ರವಾಸಕಥನಗಳು ಸಮೃದ್ಧ ವಿವರಗಳ ಜೊತೆಗೆ ಸಂವೇದನಾಶೀಲವಾದ ಮನಸ್ಸಿನ ತುಡಿತಗಳನ್ನು ಒಳಗೊಂಡು ಮುಖ್ಯವಾಗುತ್ತದೆ. 

‘ಕರ್ಮಯೋಗಿ’ ಸಿದ್ಧರಾಮನನ್ನು ಕುರಿತು ಬರೆದ ಜೀವನಚಿತ್ರ. ಕನ್ನಡ ಕಾವ್ಯಗಳನ್ನು, ಅವುಗಳ ಕಥನವನ್ನು ಆಧುನಿಕ ನುಡಿಕಟ್ಟಿನಲ್ಲಿ ಹೇಳುವ ಪ್ರಯತ್ನಗಳಲ್ಲಿ ಇದು ಒಂದು. ‘ಚತುರಂಗ’ದಲ್ಲಿ ತಮ್ಮ ಜೀವನದ ಬೇರೆಬೇರೆ ಹಂತಗಳನ್ನು, ನೆಲೆಗಳನ್ನು ಗಮನಿಸಿ ಮುಖ್ಯವಾದ ವಿವರಗಳನ್ನು ಬಳಸಿ ಒಂದು ಆತ್ಮಕಥಾನಕವನ್ನು ಬರೆದಿದ್ದಾರೆ. 

ಕಳೆದ ಶತಮಾನದ ಸಾಹಿತ್ಯ ಚರಿತ್ರೆ ಬರೆಯುವವರು ಗಮನಿಸಲೇಬೇಕಾದ ಬಹುಮುಖ್ಯ ಕೃತಿಗಳನ್ನು ಜೀಯೆಸ್ಸೆಸ್ ಬರೆದಿದ್ದಾರೆ. ಮಾತ್ರವಲ್ಲ ಸಾಹಿತ್ಯದ ಬೆಳವಣಿಗೆಯ ಹಲವು ನೆಲೆಗಳಲ್ಲಿ ಪರೋಕ್ಷವಾಗಿ ತಮ್ಮ ಸಾಹಿತ್ಯಕ ವ್ಯಕ್ತಿತ್ವದಿಂದ ಪ್ರೇರಣೆಯನ್ನು ಒದಗಿಸಿದ್ದಾರೆ ಎಂಬುದನ್ನು ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕು. 

ನಮ್ಮ ರಾಷ್ಟ್ರಕವಿ, ಕನ್ನಡಿಗರಿಗೆ ನಿರಂತರ ಜ್ಞಾನಮಾರ್ಗಿಗಳಾಗಿರುವ ಡಾ. ಜಿ. ಎಸ್. ಶಿವರುದ್ರಪ್ಪನವರಿಗೆ ನಮ್ಮ ನಮನಪೂರ್ವಕ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ನಿಮ್ಮ ಆಶೀರ್ವಾದ ನಿಮ್ಮ ಮಾರ್ಗದರ್ಶನ ನಮ್ಮೊಡನೆ ನಿರಂತರವಾಗಿರಲಿ.

Sunday 5 February 2012

ಪ್ರೊ. ಕೆ.ಎಸ್. ನಿಸಾರ್ ಅಹಮದ್ ೫-೨-೧೯೩೬

ನಿತ್ಯೋತ್ಸವದ ಕವಿ ನಿಸಾರ್ ಅಹಮದ್‌ರವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ದೇವನ ಹಳ್ಳಿಯಲ್ಲಿ. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ. ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳು. ಕನ್ನಡದಲ್ಲಿ ಆಸಕ್ತಿ ಬೆಳೆಯಲು ಇವರೆಲ್ಲರೂ ಕಾರಣರು.

೧೯೫೭-೫೮ರಲ್ಲಿ ಭೂವಿಜ್ಞಾನಿಯಾಗಿ ಆಯ್ಕೆಯಾಗಿ ಉದ್ಯೋಗ ಆರಂಭಿಸಿದ್ದು ಗುಲಬರ್ಗಾದಲ್ಲಿ . ಕೆಲಸದಲ್ಲಿ ತೃಪ್ತಿ ದೊರೆಯದೆ ಎಂ.ಎಸ್‌ಸಿ. ಮುಗಿಸಿ ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿದ್ದಾಗ ನಿವೃತ್ತಿ.

ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ. ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಭಾವಗೀತೆಯ ಕ್ಯಾಸೆಟ್ ತಂದ ಕೀರ್ತಿ. ನಿತ್ಯೋತ್ಸವ, ಸುಶ್ರಾವ್ಯ, ನವೋಲ್ಲಾಸ, ಸುಮಧುರ. ಅಪೂರ್ವ, ಹೊಂಬೆಳಕು ಕ್ಯಾಸೆಟ್ಟುಗಳ ಬಿಡುಗಡೆ.

ಮನಸು ಗಾಂಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು-ಕವನ ಸಂಕಲನಗಳು. ಎ ಮಿಡ್ ಸಮರ್ ನೈಟ್ಸ್ ಡ್ರೀಮ್, ಒಥೆಲೋ-ಕನ್ನಡಕ್ಕೆ ಅನುವಾದ. ನವಕರ್ನಾಟಕ ವಿಶ್ವಕಥಾಕೋಶಕ್ಕೆ ‘ಹೆಜ್ಜೆ ಗುರುತುಗಳು’ ಕಥಾಸಂಕಲನ ಅನುವಾದ. ಇದು ಬರಿ ಬೆಡಗಲ್ಲೊ ಅಣ್ಣ, ಮನದೊಂದಿಗೆ ಮಾತುಕಥೆ, ಅಚ್ಚುಮೆಚ್ಚು -ಗದ್ಯಬರಹಗಳು. ಹಲವಾರು ಮಕ್ಕಳ ಕೃತಿಗಳೂ ಪ್ರಕಟ.

ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಶಿಪ್ ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್, ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

Friday 3 February 2012

ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ ೩-೨-೧೯೨೮ ಯಿಂದ ೨೮.೧೦.೧೯೯೪


ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡಕುಟುಂಬದಲ್ಲಿ. ಮೂರು ತಿಂಗಳ ಮಗುವಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರು. ಚೆನ್ನಜ್ಜಿಯ ಲಾಲನೆ ಪಾಲನೆಯಲ್ಲಿ ಬೆಳೆದ ಹುಡುಗ. ಅಜ್ಜಿಯ ಬಾಯಿಂದ ಹೊರಡುತ್ತಿದ್ದ ಶರಣ ಧರ‍್ಮದ ಹಾಡುಗಳಿಂದ ಪ್ರೇರಿತ. ಆಗಲೇ ಅನುಭಾವ ಪ್ರಪಂಚಕ್ಕೆ ಪ್ರವೇಶ. ಹೊನ್ನಾಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲೆಗೆ ಬಂದಾಗ ಗಾಂಧೀ ಹುಚ್ಚು ಹತ್ತಿ ಚಳವಳಿಗೆ ಇಳಿದದ್ದು. ‘ಗಾಂತಾತನ ರೈಲು ಟಿಕೆಟ್ ಕೊಳ್ಳಬೇಡಿ !’ ಎಂದು ಘೋಷಿಸಿದ ಧೈರ‍್ಯಶಾಲಿ ಹುಡುಗ. ಹುಡುಗನೆಂದು ಪೊಲೀಸರ ಅಲಕ್ಷ್ಯ. ಮುಂದೆ ಚಳವಳಿಯ ಕಾವಿಗೆ ಸಿಕ್ಕಿಕೊಂಡು ಖಾದಿ ವ್ರತ ಧರಿಸಿದರು.

ತಂದೆಗೆ, ಮಗ ವೈದ್ಯನಾಗಬೇಕೆಂಬ ಆಸೆ. ತಿಪ್ಪೇಸ್ವಾಮಿಯವರು ಆರಿಸಿಕೊಂಡದ್ದು ಕನ್ನಡ ಆನರ್ಸ್‌. ಗಿಟ್ಟಿಸಿದ್ದು ಮೊದಲ ಸ್ಥಾನ-ಚಿನ್ನದ ಪದಕ. ಎಂ.ಎ.ನಲ್ಲೂ ಇದೇ ಪುನರಾವರ್ತನೆ. ಹಲವಾರು ಕಾಲೇಜುಗಳಲ್ಲಿ ಬೋಸಿ ಮಾನಸ ಗಂಗೋತ್ರಿಗೆ ಬರುವ ವೇಳೆಗೆ ಡಾಕ್ಟರ್ ತಿಪ್ಪೇರುದ್ರಸ್ವಾಮಿ. ಮಾಡಿದ್ದು  ಶರಣರ ಅನುಭಾವ ಸಾಹಿತ್ಯ ಕುರಿತ ಅಧ್ಯಯನ ಸಂಶೋಧನೆ. ಎರಡು ವರ್ಷ ಅಂಚೆ ಮತ್ತು ತೆರಪಿನ ಶಿಕ್ಷಣದ ನಿರ್ದೇಶಕರ ಹೊಣೆ. ನಂತರ ಶಿವಮೊಗ್ಗ  ಬಿ.ಆರ್. ಪ್ರಾಜೆಕ್ಟ್  ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ವರ್ಗ. ಪ್ರಾಧ್ಯಾಪಕರಾಗಿ ಹತ್ತು ವರ್ಷ. ಮತ್ತೆ ಗಂಗೋತ್ರಿಗೆ-ಅಧ್ಯಯನ ಸಂಸ್ಥೆಯ ನಿರ್ದೇಶಕರ ಹೊಣೆಗಾರಿಕೆ.

ರಚಿಸಿದ ಸಾಹಿತ್ಯ ಮೂರು ಬಗೆ-ಶರಣರ ಅನುಭಾವ ಸಾಹಿತ್ಯ, ಶರಣರ ಬದುಕಿನ ಕಾದಂಬರಿ, ಕರ್ನಾಟಕ ಸಂಸ್ಕೃತಿಯ ಆಳವಾದ ಅಧ್ಯಯನ. ವಚನಗಳಲ್ಲಿ ವೀರಶೈವಧರ‍್ಮ, ಪರಿಪೂರ್ಣದೆಡೆಗೆ, ಕದಳಿ ಕರ್ಪೂರ, ಜ್ಯೋತಿ ಬೆಳಗುತಿದೆ, ಕರ್ತಾರನ ಕಮ್ಮಟ, ಶೂನ್ಯ ತತ್ತ್ವ ವಿಕಾಸ ಮತ್ತು ಸಂಪಾದನೆ. ನಿಜಗುಣಶಿವಯೋಗಿ, ಶರಣರ ಮೂರು ನಾಟಕಗಳು-ಜೊತೆಗೆ ಹಲವಾರು ಕಾದಂಬರಿ, ಕಥೆಗಳ ಕರ್ತೃ.

ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಶಿವಚಿಂತನ’. ನಿಧನರಾದದ್ದು ೨೮.೧೦.೧೯೯೪ರಲ್ಲಿ.

Saturday 28 January 2012

ಕೆ.ಎಸ್.ನರಸಿಂಹಸ್ವಾಮಿ ೨೬-೧-೧೯೧೫


ಕಾವ್ಯಪಂಡಿತರಿಗಷ್ಟೇ ಅಲ್ಲ ಪಾಮರರನ್ನೂ ರಂಜಿಸ ಬಲ್ಲದು. ಇದಕ್ಕೆ ನಿದರ್ಶನ ಕೆ.ಎಸ್.ನ. ಸಾಮಾನ್ಯರನ್ನು ತನ್ನತ್ತ ಎಳೆದದ್ದೇ ಇವರ ಪದ್ಯಗಳು. ಯುವ ಪ್ರೇಮಿಗಳಿಗೆ, ದಂಪತಿಗಳಿಗೆ ಹರ್ಷೋತ್ಪತ್ತಿ ಮಾಡಿದ್ದೇ ಮೈಸೂರು ಮಲ್ಲಿಗೆ. ೨೬ ಮುದ್ರಣ (೨೦೦೩) ಇವರ ಪ್ರಖ್ಯಾತಿಗೆ ಸಾಕ್ಷಿ. ಕನ್ನಡ ನಾಡಿಗೇ ಪಸರಿಸಿತು ಮಲ್ಲಿಗೆಯ ಕಂಪು.
ಕೆ.ಎಸ್.ನ. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕಿಕ್ಕೇರಿ. ತಂದೆ ಸುಬ್ಬರಾಯರು, ತಾಯಿ ನಾಗಮ್ಮ. ಆರಂಭದ ಶಿಕ್ಷಣ ಮೈಸೂರು ಟ್ರೈನಿಂಗ್ ಕಾಲೇಜಿನ ಶಿಕ್ಷಣ ಸಂಸ್ಥೆಯಲ್ಲಿ. ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜ್ಯೂನಿಯರ್ ಬಿ.ಎ. ತಂದೆಯ ನಿಧನ. ಓದು ಅಪೂರ್ಣ. ೧೯೩೬ರಲ್ಲಿ ತಿಪಟೂರಿನಲ್ಲಿ ವೆಂಕಮ್ಮನೊಂದಿಗೆ ವಿವಾಹ. ಮೈಸೂರಿನಲ್ಲಿ ಸರ್ಕಾರಿ ನೌಕರಿ. ನಂಜನಗೂಡು ಬೆಂಗಳೂರಿನಲ್ಲಿ ಸೇವಾವಧಿ. ೧೯೭೦ರಲ್ಲಿ ನಿವೃತ್ತಿ.

ಕೆ.ಎಸ್.ನ. ಪ್ರಧಾನವಾಗಿ ಕವಿ. ಮೌಲಿಕ ಕೃತಿಗಳ ಅನುವಾದವೂ ಸೇರಿವೆ. ಎ.ಆರ್.ಕೃಷ್ಣಶಾಸ್ತ್ರಿ, ಕುವೆಂಪು, ತೀ.ನಂ.ಶ್ರೀ., ವಿ.ಸೀ. ಗೋಪಾಲಕೃಷ್ಣ ಅಡಿಗ ಮೊದಲಾದವರ ನಿಕಟ ಸಂಪರ್ಕ-ಪ್ರಭಾವ. ಮೊದಲ ಕವನ ಸಂಗ್ರಹ ಮೈಸೂರು ಮಲ್ಲಿಗೆ ೧೯೪೨ರಲ್ಲಿ ಪ್ರಕಟ. ಐರಾವತ, ದೀಪದಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ದುಂಡುಮಲ್ಲಿಗೆ, ನವಿಲದನಿ, ಸಂಜೆಹಾಡು, ಕೈಮರದ ಬಾಗಿಲು, ದೀಪ ಸಾಲುಗಳ ನಡುವೆ ಮುಂತಾದ ಕವನ ಸಂಗ್ರಹಗಳು. ಬಣ್ಣದ ಚಿಟ್ಟೆ, ಬೆಟ್ಟದ ಗೌರಿ, ಕಂಬನಿ, ನಿನ್ನ ಹೆಸರು, ಚಿತ್ರವಳ್ಳಿಯ ಚೆಲುವೆಯರು ಮುಂತಾದ ಕವನಗಳ ಅನುವಾದ.

ಅಬ್ಬರವಿರದ, ಆಡುಮಾತಿನ, ಲಯಕ್ಕೆ ಹತ್ತಿರದ, ಭಾಷೆಯ ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತವೇ ಕೆ.ಎಸ್.ನ. ಪದ್ಯದ ಪ್ರಮುಖ ಅಂಶ, ಪಡೆದ ಜನಪ್ರಿಯತೆ.

ಅರಸಿ ಬಂದ ಪ್ರಶಸ್ತಿಗಳು ಹಲವಾರು. ದೇವರಾಜ ಬಹದ್ದೂರ್ ಬಹುಮಾನ, ರಾಜ್ಯ ಸಂಸ್ಕೃತಿ ಶಾಖೆ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿಗಳಿಗೆ ಭಾಜನರಾದವರು. ೧೯೭೦ರಲ್ಲಿ ಪ್ರೀತಿಯಿಂದ ಅರ್ಪಿಸಿದ ಗೌರವ ಗ್ರಂಥ ‘ಚಂದನ.’ ನಿಧನರಾದದ್ದು ೨೮.೧೨.೨೦೦೩ರಲ್ಲಿ.

ಸಾ.ಶಿ. ಮರುಳಯ್ಯ ೨೮-೧-೧೯೩೧

ಸಾ.ಶಿ.ಮ.ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮ. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಸಾಸಲು ಗ್ರಾಮದಲ್ಲಿ. ಶೆಟ್ಟಿ ಕೆರೆಯಲ್ಲಿ ಮಾಧ್ಯಮಿಕ, ಹೈಸ್ಕೂಲು ಸೇರಿದ್ದು ತಿಪಟೂರು. ಕಾಲೇಜು ಓದಿದ್ದು ಚಿತ್ರದುರ್ಗ. ಇಂಟರ್ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತೆ ಕಲಸ. ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಪ್ರಯಾಣ. ಆನರ್ಸ್‌ನಲ್ಲಿ ಡಿ.ಎಲ್.ಎನ್., ದೇಜಗೌ., ತ.ಸು.ಶಾ., ಎಸ್.ವಿ. ರಂಗಣ್ಣ, ಎಸ್.ವಿ. ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ. ಎಂ.ಎ. ಓದಲು ಅಡಚಣೆ. ಪುನಃ ಉದ್ಯೋಗ. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಉಪಾಧ್ಯಾಯ ವೃತ್ತಿ. ಎಂ.ಎ. ಮುಗಿಸುತ್ತಿದ್ದಂತೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜಿನಲ್ಲಿ ಬೋಧನಾ ವೃತ್ತಿ. ಬೆಂಗಳೂರಿಗೆ ವರ್ಗಾವಣೆ. ಬಡ್ತಿ ಪಡೆದು ಪುನಃ ತುಮಕೂರು, ಚೆನ್ನಪಟ್ಟಣ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆ. ಅಲ್ಲಿಂದ ಮಂಗಳೂರು, ನಂತರ ಬೆಂಗಳೂರಿಗೆ-ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕ. ಆರು ವರ್ಷದ ನಂತರ ನಿವೃತ್ತಿ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೧೯೯೫-೧೯೯೮ರವರೆಗೆ. ಚಿತ್ರದುರ್ಗ ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ಬರವಣಿಗೆ ಪ್ರಾರಂಭ. ಹಲವಾರು ಗ್ರಂಥಗಳ ಸಂಪಾದನೆ. ವಿಶ್ವಕೋಶದ ಪ್ರಧಾನ ಸಂಪಾದಕರು. ರಚಿಸಿದ ಕೃತಿಗಳು ಸುಮಾರು ಅರವತ್ತು. ಶಿವತಾಂಡವ, ಕೆಂಗನಕಲ್ಲು, ರಾಸಲೀಲೆ, ರೂಪಸಿ (ಕಾವ್ಯ) ; ಪುರುಷಸಿಂಹ, ಹೇಮಕೂಟ, ಸಾಮರಸ್ಯದ ಶಿಲ್ಪ (ಕಾದಂಬರಿ) ; ವಿಜಯವಾತಾಪಿ, ಎರಡು ನಾಟಕಗಳು, ಮರೀಬೇಡಿ ಮುಂತಾದ ನಾಟಕಗಳು ; ನೆಲದ ಸೊಗಡು-ಕಥಾಸಂಕಲನ. ವಚನ ವೈಭವ, ಸ್ಪಂದನ, ಅವಲೋಕನ ಮುಂತಾದ ಸಂಶೋಧನಾ ಕೃತಿಗಳು. ಮಾಸ್ತಿಯವರ ಕಾವ್ಯಸಮೀಕ್ಷೆ, ಅಭಿವ್ಯಕ್ತ, ಅನುಶೀಲನ ಮೊದಲಾದ ವಿಮರ್ಶಾ ಕೃತಿಗಳು.

ಸಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಮುಖ್ಯವಾದವುಗಳು. ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಇಷಾಂಶು ಮತ್ತು ಅಭಿಜ್ಞ’