ಹದಿನೈದು- ಇಪ್ಪತ್ತು ವರ್ಷಗಳ ಕಾಲ ಪುಸ್ತಕವನ್ನು ಹಿಡಿದುಕೊಂಡು ಓದಿದ ವ್ಯಕ್ತಿಗಳು ಸಹ “ಓದುವುದರಿಂದೇನು ಪ್ರಯೋಜನ? ಪುಸ್ತಕ ಓದದೆ ಬದುಕಲಿಕ್ಕಾಗದೆ?” ಎಂದು ಕೇಳುವುದು ವಿಚಿತ್ರವೆನಿಸುತ್ತದೆ. ನಿಜ, ಪುಸ್ತಕ ಓದುವುದು ಮಾನವ ಪ್ರಾಣಿಯೊಂದೇ. ಆದರೆ, ಪುಸ್ತಕವಿಲ್ಲದಿದ್ದರೆ ಶಿಕ್ಷಕ, ಶಾಲೆ- ಕಾಲೇಜು- ಯೂನಿವರ್ಸಿಟಿ ಇತ್ಯಾದಿ ಯಾವುದೂ ಇರುವುದಿಲ್ಲ ಎಂದು ಒಬ್ಬ ಓದಿದ ವ್ಯಕ್ತಿ ಅರ್ಥ ಮಾಡಿಕೊಳ್ಳುವುದಿಲ್ಲ ಎಂದಾದರೆ, ಶಾಲೆ- ಕಾಲೇಜು ಓದಿನಲ್ಲಿಯೂ `ದಂಡದ ಓದು’ ಎಂಬುದಿದೆ ಎಂದು ಭಾವಿಸಬೇಕಾಗುತ್ತದೆ.
ಶತಮಾನಗಳಿಂದ ಜ್ಞಾನವೆಂಬುದು ಪ್ರವಹಿಸುತ್ತಾ ಬಂದಿರುವುದು ಮುಖ್ಯವಾಗಿ ಲಿಖಿತ ಅಕ್ಷರಗಳ ಮೂಲಕ. ಯಾವುದಾದರೊಂದು ಕೋರ್ಸು ಒಂದು ಸರ್ಟಿಫಿಕೇಟಿನಲ್ಲಿ ಕೊನೆಗೊಳ್ಳುತ್ತದೆ. ಆದರೆ, ಅದು ಪುಸ್ತಕದ ಕೊನೆಯಲ್ಲ, ಬದುಕು ಎಂಬ ಪುಸ್ತಕದ ಕೊನೆಯೂ ಅಲ್ಲ. “ನಾವು ಯಾಕೆ ಯೋಚಿಸಬೇಕು? ಯೋಚಿಸುವುದರಿಂದ ಏನು ಪ್ರಯೋಜನ?” ಎಂದು ಯಾರಾದರೂ ಕೇಳಿದರೆ, ಆ ಪ್ರಶ್ನೆಗೆ ಉತ್ತರವಿಲ್ಲ.
ಅದಕ್ಕೆ ಉತ್ತರಿಸಲು ಪ್ರಯತ್ನಿಸಬೇಕಾದ ಅಗತ್ಯವೂ ಇಲ್ಲ. ಅಂಥ ಪ್ರಶ್ನೆಗಳಿಗೆ ವ್ಯಕ್ತಿಗೆ ಹೊರಗಿಂದ ಉತ್ತರ ಸಿಗುವುದಿಲ್ಲ. ಆತನ ಒಳಗೇ ಸಿಗಬೇಕು. ಒಂದು ಸರ್ಟಿಫಿಕೇಟಿನ ಆಧಾರದಲ್ಲಿ ಒಂದು ಪ್ರತಿಷ್ಠಿತವಾದ ಮತ್ತು ಹಲವಂಕೆ ಸಂಬಳದ ಉದ್ಯೋಗವನ್ನು ಪಡೆದುಕೊಂಡಿರುವ ವ್ಯಕ್ತಿ ಈ ಪ್ರಶ್ನೆಯನ್ನು ಕೇಳುವುದಾದರೆ, ಆತ ಉತ್ತರಕ್ಕಾಗಿ ಆ ಪ್ರಶ್ನೆಯನ್ನು ಕೇಳಿರುವುದಿಲ್ಲ? ಎನ್ನುವುದು ಸ್ಪಷ್ಟ. ಏಕೆಂದರೆ, ಉತ್ತರ ಆತನ ಒಳಗೇ ಇದೆ.
ಪುಸ್ತಕಗಳು ಶತಮಾನಗಳ ಚಿಂತನೆ- ವಿಚಾರ- ಅವಲೋಕನದ ದಾಖಲೆಗಳು. ಅದರಲ್ಲಿ ಶ್ರೇಷ್ಠರದ್ದಷ್ಟೇ ಅಲ್ಲ ಸಾಮಾನ್ಯರದ್ದೂ ಇದೆ. ಉಚ್ಚ ಕುಲಜರದ್ದು ಮಾತ್ರ ಅಲ್ಲ, ಉಚ್ಚ ಕುಲಜರಲ್ಲದವರದ್ದೂ ಇದೆ. ನಿಜವಾದ `ಟ್ರಡಿಷನ್’ ಎಂದರೆ ಅದು; ಮೂಢನಂಬಿಕೆಗಳು, ಕಂದಾಚಾರಗಳು ಅಲ್ಲ. ಶ್ರೇಷ್ಠತೆಯಿರುವುದು ಚಿಂತನೆ ಮತ್ತು ಅದರ ಕ್ರಿಯಾರೂಪದಲ್ಲಿ. ಕೆಲವರು ತಮ್ಮ ಇಡೀ ಬದುಕನ್ನೇ ಅದಕ್ಕಾಗಿ ವ್ಯಯಿಸಿದ್ದಿದೆ. ನಮ್ಮ ಇಂದಿನ ಬದುಕು ಚೆನ್ನಾಗಿದ್ದರೆ, ಅದಕ್ಕೆ ಕಾರಣ ಈ ಪರಂಪರೆ. ಈ ಅಮೂಲ್ಯ ಪರಂಪರೆಯನ್ನು ತನ್ನಿಂದ ಬೇರ್ಪಡಿಸಿಕೊಂಡ ಶಿಕ್ಷಣ ಶಿಕ್ಷಣವಲ್ಲ.
ಮಗುವನ್ನು ಯೋಚಿಸಿ ಮಾತಾಡುವ, ಯೋಚಿಸಿ ಬರೆಯುವ ಸುಶಿಕ್ಷಿತನನ್ನಾಗಿಸಬೇಕು. ಬದುಕಿನ ಎಲ್ಲಾ ಸಂದರ್ಭದಲ್ಲಿಯೂ ಯೋಚಿಸಿ ಮುಂದಡಿಯಿಡುವ ವ್ಯಕ್ತಿಯನ್ನಾಗಿ ರೂಪಿಸಬೇಕು. ಅದಕ್ಕೆ ವಿವಿಧ ಅಗತ್ಯವಿರುವ ವಿಧಾನಗಳನ್ನು ತಾಯಿ- ತಂದೆ, ಶಿಕ್ಷಕ ಮತ್ತು ಸ್ವತಃ ಮಗುವೇ ಅನುಸರಿಬೇಕಾಗುತ್ತದೆ. ಜ್ಞಾನಕ್ಕೆ ಅನುಭವ ಅಗತ್ಯ. ಆದರೆ ಅನುಭವದ ಜೊತೆಗೆ ಚಿಂತನೆ ಮತ್ತು ಓದು ಕೂಡ ಅಗತ್ಯ. ವರ್ಷಗಳ ಅನುಭವದಿಂದ ದೊರಕದ್ದನ್ನು ಕೂಡ ಪುಸ್ತಕ ಕೆಲವು ನಿಮಿಷಗಳಲ್ಲಿ ಒದಗಿಸುತ್ತದೆ.
ಪ್ರಶ್ನಿಸಲು, ಪ್ರಶ್ನಿಸಿ ಕಂಡುಕೊಳ್ಳಲು ಪ್ರತಿಯೊಂದು ಮಗುವಿಗೂ ಸಾಧ್ಯ. ಅದು ಕೇವಲ ಪ್ರತಿಭಾವಂತ ಮಗು ಮಾಡುವಂಥದು ಎಂದೇನಿಲ್ಲ. ಪ್ರಶ್ನಿಸುವ ಅವಕಾಶವಿಲ್ಲದೆ ಮಗುವನ್ನು ಬೆಳೆಸುವವರಿದ್ದಾರೆ. ಏಕೆಂದರೆ, ಅಂಥ ಮಕ್ಕಳ ಉದ್ಯೋಗ ಅಥವಾ ವೃತ್ತಿ, ಮಾತ್ರವಲ್ಲ, ಬದುಕು ಸಹ ಏನು ಎನ್ನುವುದು ಅವರು ಹುಟ್ಟುವ ಮೊದಲೇ ನಿರ್ಧಾರವಾಗಿರುತ್ತದೆ. ಅನೇಕ ಶ್ರೀಮಂತರ ಮಕ್ಕಳು ಅಂಥವರು. ಪುಸ್ತಕಗಳು ಅಥವಾ ಚಿಂತನೆ ಅವರಿಗೆ ಅಗತ್ಯವಿರುವಂಥದಲ್ಲ ಎಂಬ ತಪ್ಪು ಮನೋಭಾವ ಕೂಡ ಸಮಾಜದಲ್ಲಿ ಇದೆ. ಆ ಮನೋಭಾವವನ್ನು ಇರಿಸಿಕೊಂಡು ‘ಸುಮ್ಮನೆ’ ಶಾಲೆ- ಕಾಲೇಜಿಗೆ ಹೋಗುವವರು ಕೂಡ ಇದ್ದಾರೆ. ಇಂದಿನ ದಿನಗಳಲ್ಲಿ ‘ಸಾಮಾಜಿಕ ಮನಸ್ಸ’ನ್ನೇ ತಮ್ಮ ಮನಸ್ಸಾಗಿಸಿಕೊಂಡ ವ್ಯಕ್ತಿಗಳ ಸಂಖ್ಯೆ ಬಹಳ ದೊಡ್ಡದಿದೆ. ಕಾರಣ, ಒಬ್ಬನ ವೈಭವೋಪೇತ ಬದುಕೇ ಇನ್ನೊಬ್ಬನಿಗೆ ಮಾದರಿಯಾಗಿದೆ. ತನ್ನ ಸ್ವಂತ ಬದುಕನ್ನು ರೂಪಿಸಿಕೊಳ್ಳಲು ಸಮಾಜವೂ ಬಿಡುತ್ತಿಲ್ಲ, ಶಿಕ್ಷಣವೂ ಬಿಡುತ್ತಿಲ್ಲ!
ನಿಮ್ಮ ಪುಟ್ಟ ಮಗು ಪ್ರತಿಭಾವಂತ ಅಥವಾ ಜೀನಿಯಸ್ ಎಂದು ನಿಮಗನಿಸಿದರೆ, ತಪ್ಪೇನಿಲ್ಲ. ಆದರೆ, ಇತರರಲ್ಲಿ ಹಾಗೆ ಹೇಳಿಕೊಳ್ಳಬಾರದು ಅಷ್ಟೆ. ಜೀನಿಯಸ್ ಗಳ ಜೀವನ ಚರಿತ್ರೆಯನ್ನು ಓದಿದರೆ, ತಮ್ಮ ಮಗುವಿನ ಬಗ್ಗೆ ತಾಯಿ- ತಂದೆ ಇಂಥ ಕಲ್ಪನೆಗಳನ್ನು ಏಕೆ ಇಟ್ಟುಕೊಳ್ಳಬಾರದು ಎಂದು ತಿಳಿಯುತ್ತದೆ. ಮೂರು ವರ್ಷದ ತನ್ನ ಮಗುವನ್ನು ಜೀನಿಯಸ್ ಎಂದು ಭ್ರಮಿಸಿಕೊಂಡು ಅದಕ್ಕೆ ವಿಶೇಷ ರೀತಿಯ ಶಿಕ್ಷಣ ಕೊಡಬಯಸಿದರೆ ಆ ಮಗುವಿನ ಮಿದುಳಿಗೇ ತೊಂದರೆಯಾದೀತು! ದೊಡ್ಡವರಿಗೆ ಅರ್ಥವಾಗದ, ದೊಡ್ಡವರಿಂದ ಉತ್ತರಿಸಲಾಗದ ಪ್ರಶ್ನೆಗಳನ್ನು ಮಕ್ಕಳು ಕೇಳುತ್ತವಲ್ಲ ಎಂದು ಬೆರಗಾಗುವವರು ತಮ್ಮ ಮಕ್ಕಳಿಗೋಸ್ಕರವಾದರೂ ಸ್ವಲ್ಪ ಮಕ್ಕಳ ಮನೋವಿಜ್ಞಾನವನ್ನು ಕಲಿಯುವುದೊಳ್ಳೆಯದು. ಅದೇ ರೀತಿ, ಮಗು ಮಾತು ಆರಂಭಿಸಲು ತಡ ಮಾಡಿತು, ಮಗು ಸ್ಮಾರ್ಟ್ ಆಗಿಲ್ಲ ಎಂದು ಮುಂತಾಗಿ ಚಿಂತಿಸುವವರು ಕೂಡ ಮಕ್ಕಳ ಮನೋವಿಜ್ಞಾನದ ಜೊತೆಗೆ ಜೀನಿಯಸ್ ಗಳ ಜೀವನ ಚರಿತ್ರೆಯನ್ನು ಕೂಡ ಓದಬೇಕು.
ಒಂದು ವಿಷಯದಲ್ಲಿ ಆಸಕ್ತಿ ಎನ್ನುವುದು ಅದನ್ನು ಅಧ್ಯಯನ ಮಾಡಲು ಕಲಿಯಲು ತೊಡಗಿದ ಬಳಿಕ ಹುಟ್ಟುತ್ತದೆ; ಅಧ್ಯಯನವನ್ನು ಆರಂಭಿಸುವ ಮೊದಲಲ್ಲ. ವಿಜ್ಞಾನ ವಿಷಯಗಳಾಗಿರಲಿ, ಕಲಾ ವಿಷಯಗಳಾಗಿರಲಿ, ಸಂಗೀತ, ಚಿತ್ರಕಲೆ, ಕ್ರೀಡೆ ಇತ್ಯಾದಿ ಎಲ್ಲದರ ವಿಷಯದಲ್ಲಿಯೂ ಹೀಗೆ; ತಿನ್ನಲಾರಂಭಿಸದ ಮೇಲೆ ರುಚಿ. ಹಾಗಲಕಾಯಿ ಸಹ ಇಷ್ಟವಾಗುವುದು ಹೀಗೆ. ಬಹುತೇಕ ಎಲ್ಲ ಲೇಖಕರ, ವಿಜ್ಞಾನಿಗಳ, ಸಮಾಜ ಸುಧಾರಕರ, ರಾಜಕಾರಣಿಗಳ, ಕಲಾವಿದರ, ಕ್ರೀಡಾಪಟುಗಳ ಬದುಕಿನಲ್ಲಿ ನಡೆದುದು ಇದೇ.
ಮಕ್ಕಳು ರೊನಾಲ್ಡ್ ರೊಸ್, ಗ್ರೆಗರ್ ಮೆಂಡೆಲ್, ಲೂಯಿ ಪ್ಯಾಸ್ಚರ್, ಅಲ್ಬರ್ಟ್ ಐನ್ಸ್ಟೀನ್, ಚಾರ್ಲ್ಸ್ ಡಿಕಿನ್ಸ್, ವಿನ್ಸ್ಟನ್ ಚರ್ಚಿಲ್, ಮಾರ್ಕ್ ಟ್ವೆಯಿನ್, ಮಹಾತ್ಮಾ ಗಾಂಧಿ, ರವೀಂದ್ರನಾಥ್ ಟಾಗೋರ್, ಮೇರಿ ಕ್ಯೂರಿ, ರಸ್ಕಿನ್ ಬಾಂಡ್, ಚರಕ, ವಾಗ್ಭಟ, ಚಾರ್ಲಿ ಚಾಪ್ಲಿನ್ ಮುಂತಾಗಿ ನೂರಾರು ವ್ಯಕ್ತಿಗಳ ಕುರಿತಾಗಿ ಓದಬೇಕು. ಪ್ರತಿಯೊಬ್ಬರೂ ತಾವು ಮಾಡಿದ್ದನ್ನು ಪ್ರೀತಿಸಿದ್ದು ಅದನ್ನು ಮಾಡತೊಡಗಿದ ಮೇಲೆ. ಅದಕ್ಕೋಸ್ಕರ ಯಾವುದೇ ಪ್ರವೇಶ ಪರೀಕ್ಷೆ ಪಾಸು ಮಾಡುವ ಮೊದಲೂ ಅಲ್ಲ, ಪಾಸು ಮಾಡಿದ ಬಳಿಕವೂ ಅಲ್ಲ. ಅವರು ಮಾಡಿದ್ದೇ ಅವರ ಬದುಕಾದದ್ದು ಹಾಗೆ. ಅತ್ಯಂತ ಪ್ರತಿಭಾವಂತ ವಿಜ್ಞಾನಿಗಳಲ್ಲೊಬ್ಬನಾದ ಥಾಮಸ್ ಆಲ್ವಾ ಎಡಿಸನ್ `ಜೀನಿಯಸ್ ಎಂಬುದು ಹತ್ತು ಪರ್ಸೆಂಟ್ ಸ್ಫೂರ್ತಿ, ತೊಂಬತ್ತು ಪರ್ಸೆಂಟ್ ಶ್ರಮ’ ಎಂದು ಹೇಳಿದ್ದಾನೆ.
ಕೆಲವೇ ಕೆಲವು ವಾಕ್ಯಬಂಧಗಳ ಮೇಲೆ ಮತ್ತು ಹೆಚ್ಚೆಂದರೆ ಒಂದೂವರೆ ಸಾವಿರ ಪದಗಳನ್ನು ಬಳಸುವ ಮೂಲಕ ತಮಗೆ ಇಂಗ್ಲಿಷ್ ಗೊತ್ತಿದೆ ಎಂಬ ಅಭಿಪ್ರಾಯವನ್ನು ಮೂಡಿಸಬಹುದು. ಆದರೆ, ಭಾಷೆ ‘ಗೊತ್ತಿರುವುದು’ ಬೇರೆ, ಮಾತಿನಲ್ಲಿಯೂ, ಬರವಣಿಗೆಯಲ್ಲಿಯೂ ಪ್ರಭುತ್ವವನ್ನು ಹೊಂದಿರುವುದು ಬೇರೆ. ಇಂಗ್ಲಿಷಿನಲ್ಲಿ ಮಾತಾಡುವ ಮತ್ತು ಬರೆಯುವ ಸಾಮರ್ಥ್ಯ ಎಂದರೆ, ಇಂಗ್ಲಿಷ್ ಭಾಷೆಯಲ್ಲಿನ ಎಲ್ಲಾ ಪದಬಂಧಗಳನ್ನು ಮತ್ತು ಕೆಲವು ಸಾವಿರ ಪದಗಳನ್ನು ಬಳಸುವ ಸಾಮರ್ಥ್ಯ ಎಂದು ಅರ್ಥ.
ಯೋಚನೆ ರೂಪುಗೊಳ್ಳುವುದು ಈ ವಾಕ್ಯಬಂಧಗಳು ಮತ್ತು ಪದ ಸಂಪತ್ತಿನ ಮೂಲಕ.
ವಿದ್ಯಾರ್ಥಿಗೆ ಮಾತು ಮತ್ತು ಬರವಣಿಗೆ ದಿನದಿನದ ಅಗತ್ಯದ ಸಣ್ಣ ವೃತ್ತವನ್ನು ದಾಟಿ ವಿವಿಧ ವಿಷಯಗಳ ಕುರಿತು ಮಾತಾಡುವ ಮತ್ತು ಬರೆಯುವ ಸಾಮರ್ಥ್ಯವಿರಬೇಕಾಗುತ್ತದೆ. ವಾಸ್ತವದಲ್ಲಿ ದಿನ ಬಳಕೆಗೆ ನಮ್ಮ ಸಮಾಜದಲ್ಲಿ ಯಾರಿಗೂ ಇಂಗ್ಲಿಷಿನ ‘ನೈಸರ್ಗಿಕ ಆಗತ್ಯ’ ಇರುವುದಿಲ್ಲ. ‘ಇಂಗ್ಲಿಷ್ ಮಾಧ್ಯಮ’ವಷ್ಟೇ ಅಲ್ಲದೆ, ‘ಆಂಗ್ಲ ಮಾಧ್ಯಮ’ ಎಂದು ತಮ್ಮನ್ನು ತಾವೇ ವರ್ಣಿಸಿಕೊಳ್ಳುವ ಶಾಲೆ- ಕಾಲೇಜುಗಳ ಕಂಪೌಂಡು ಗೋಡೆಗಳೊಳಗೆ ಆಂಗ್ಲೀಯ ನಡೆನುಡಿಗಳ ಅಗತ್ಯ ಇರಬಹುದು; ಹೊರಗಂತೂ ಇಲ್ಲ.
ಮಾಧ್ಯಮ ಯಾವುದೇ ಆಗಿರಲಿ, ವಿದ್ಯಾರ್ಥಿಗಿರಬೇಕಾದ ಸಾಮರ್ಥ್ಯ ಯಾವುದೆಂದರೆ ಸೃಜನಶೀಲವಾಗಿ ಯೋಚಿಸುವ ಸಾಮರ್ಥ್ಯ. ಅದಕ್ಕೆ ವಿದ್ಯಾರ್ಥಿಯ ಸ್ವಂತ ಭಾಷೆಯಲ್ಲಿಯೂ ಇಂಗ್ಲಿಷಿನಲ್ಲಿಯೂ ವಿಫುಲ ಅವಕಾಶವನ್ನು ಶಾಲೆ ಅಥವಾ ಕಾಲೇಜು ಒದಗಿಸಿಕೊಡಬೇಕು. ಕೇವಲ ‘ಆಂಗ್ಲ ಮಾಧ್ಯಮ’ ಎಂಬ ನಾಮಫಲಕದ ಬಲದಿಂದ ಯಾರೂ ಆಂಗ್ಲರಾಗುವುದು ಸಾಧ್ಯವಿಲ್ಲ. ಅದು ಸ್ವಂತ ಭಾಷೆಯ ಮೇಲೆ ಅನಾದರವನ್ನು ಹುಟ್ಟಿಸಬಹುದು ಮತ್ತು ತನ್ಮೂಲಕ ವಿದ್ಯಾರ್ಥಿಯ ಸೃಜನಶೀಲ ಚಿಂತನಶಕ್ತಿಯನ್ನು ಕುಂಠಿತಗೊಳಿಸಬಹುದು.
ಲೇಖಕರು: ಕೆ.ಟಿ. ಗಟ್ಟಿ