Friday 15 June, 2012



ನಿರಂಜನ


೧೫.೬.೧೯೨೪

೧೩.೩.೧೯೯೨

‘ಆಳುವ ಪರಕೀಯರ ಹಂಗುಬೇಡ’ ಎಂದು ಎಸ್‌.ಎಸ್‌.ಎಲ್‌.ಸಿ.ಪ್ರಮಾಣ ಪತ್ರವನ್ನೇ ಸ್ವೀಕರಿಸದೆ ಕಾಸರಗೋಡಿನ ನೀಲೇಶ್ವರ ಹೈಸ್ಕೂಲಿನಿಂದ ಹೊರನಡೆದ ಸಮಾಜ ಸುಧಾರಕ, ರೈತ ಹೋರಾಟಗಾರ, ಸಾಹಿತ್ಯಚಳುವಳಿಯ ನೇತಾರ ಕುಳಕುಂದ ಶಿವರಾಯರು ಹುಟ್ಟಿದ್ದು ದ.ಕ. ಜಿಲ್ಲೆಯ ಕುಳಕುಂದದಲ್ಲಿ ೧೯೨೫ ರ ಜೂನ್‌ ೧೫ ರಂದು. ತಾಯಿ ಚಿನ್ನಮ್ಮ, ತಂದೆ ಶ್ರೀನಿವಾಸರಾಯರು. ಆರು ತಿಂಗಳು ಮಗುವಾಗಿದ್ದಾಗ ಮಗುವಿನೊಡನೆ ತಾಯಿ ಬಂದು ನೆಲೆಸಿದ್ದು ಕಾವು ಎಂಬ ಹಳ್ಳಿಯಲ್ಲಿ.

ಕಾವುನಲ್ಲಿ ಲೋಯರ್ ಎಲಿಮೆಂಟರಿ ಶಾಲೆಯಲ್ಲಿ ಮೂರು ವರ್ಷ ಓದಿದ ನಂತರ ಸುಳ್ಯದ ಹೈಯರ್ ಎಲಿಮೆಂಟರಿ ಶಾಲೆ. ಸುಳ್ಯದ ನಂತರ ಹೈಸ್ಕೂಲಿಗೆ ಸೇರಿದ್ದು ನೀಲೇಶ್ವರದ ರಾಜಾಸ್‌ ಹೈಸ್ಕೂಲು. ಅಷ್ಟರಲ್ಲಾಗಲೇ ಶಿವರಾಮ ಕಾರಂತರ ಮಕ್ಕಳ ಕೂಟ, ವಿಟ್ಲ-ಕನ್ಯಾನದ ಮಕ್ಕಳ ಕೂಟ, ಪುತ್ತೂರು ನಾಡಹಬ್ಬ ಮುಂತಾದೆಡೆ ಸ್ವಯಂಸೇವಕನಾಗಿ ರಾಜರತ್ನಂ, ಗೊರೂರು, ವಿ.ಸೀ, ಅ.ನ.ಕೃ., ಮುಂತಾದ ಗಣ್ಯ ಸಾಹಿತಿಗಳನ್ನು ಹತ್ತಿರದಿಂದ ಕಂಡದ್ದು.

ಹೈಸ್ಕೂಲಿನಲ್ಲಿದ್ದಾಗಲೇ ಕೈ ಬರಹದ ಪತ್ರಿಕೆಯನ್ನೂ ಹೊರಡಿಸಿ ಅದಕ್ಕಾಗಿ ಬರೆದ ಹಲವಾರು ಚಿಕ್ಕ ಚಿಕ್ಕ ಕತೆ, ಲೇಖನಗಳು. ಈ ಸಂದರ್ಭದಲ್ಲೆ ಕಮ್ಯೂನಿಸಂ ಪರಿಚಯ ಮಾಡಿಕೊಂಡು, ವರ್ಷಾರಂಭದಲ್ಲಿ ಕಾಸರಗೋಡು ತಾಲ್ಲೂಕು ವಿದ್ಯಾರ್ಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯ ಜವಾಬ್ದಾರಿ.

ಶಿವರಾಯರ ಮೊದಲ ಬರಹ ಪ್ರಕಟವಾದುದು ಫಣಿಯಾಡಿಯವರ ತುಳು ಭಾಷೆಯ ‘ತುಳುನಾಡು’ ಪತ್ರಿಕೆಯಲ್ಲಿ ಕಿಶೋರ ಎಂಬ ಕಾವ್ಯನಾಮದಿಂದ.

ಎಸ್‌.ಎಸ್‌.ಎಲ್‌.ಸಿ.ಯ ನಂತರ ಮಂಗಳೂರಿಗೆ ತೆರಳಿದ ಶಿವರಾಯರು ಸೇರಿದ್ದು ರಾಷ್ಟ್ರ ಬಂಧು ಪತ್ರಿಕೆಯ ಉಪಸಂಪಾದಕರಾಗಿ. ಆದರೆ ಈ ಹಿಂದೆಯೇ ರಾಷ್ಟ್ರಬಂಧು ಪತ್ರಿಕೆಗೆ ಕಿಶೋರ, ಕುಳಕುಂದ, ಕತೆಗಾರ ಎಂಬ ಹೆಸರಿನಿಂದ ಚಿಕ್ಕ ಕತೆಗಳನ್ನೂ ಬರೆದು ಕಳುಹಿಸಿತೊಡಗಿದ್ದು, ಇವರ ವಿಳಾಸ ಕುಳಕುಂದ ಶಿವರಾಯ, ಟೋಲ್‌ಗೇಟ್‌, ಸುಳ್ಯ ಎಂದಿರುತ್ತಿದ್ದು ನಂತರ ನೀಲೇಶ್ವರದ ರಾಜಾಸ್‌ ಹೈಸ್ಕೂಲು ವಿಳಾಸ ನೀಡಿದಾಗ, ಇವರಾರೋ ವಯಸ್ಸಾದ ಶಾಲಾ ಪ್ರಾಧ್ಯಾಪಕರಾಗಿರಬೇಕೆಂದು ಭಾವಿಸಿದ್ದ ರಾಷ್ಟ್ರಬಂಧು ಪತ್ರಿಕೆಯವರು, ಶಿವರಾಯರು ಎಸ್‌.ಎಸ್‌.ಎಲ್‌.ಸಿ. ನಂತರ ಪತ್ರಿಕಾ ಕಚೇರಿಯನ್ನೂ ಪ್ರವೇಶಿಸಿದಾಗಲೇ ವಿದ್ಯಾರ್ಥಿ ಎಂದು ತಿಳಿದಾಗ ಆಶ್ಚರ್ಯಗೊಂಡರು. ರಾಷ್ಟ್ರಬಂಧು ಪತ್ರಿಕೆಯಲ್ಲಿದ್ದಾಗಲೇ ಬಸವರಾಜಕಟ್ಟೀಮನಿಯವರ ಉಷಾ ಪತ್ರಿಕೆಗೂ ಕತೆಗಳನ್ನೂ ಕಳುಹಿಸತೊಡಗಿದ್ದರು.

ಇವರ ಮೊದಲ ಕತಾ ಸಂಕಲನ ಅಯ್ಯನ್ಯೆ ಪ್ರಕಟವಾದಾಗ ಇವರಿಗೆ ೨೧ ರ ಹರೆಯ (೧೯೪೫).
ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಂಗಳೂರಿನ ತಾಯಿನಾಡು, DAILY NEWS, ಜನವಾಣಿ ದೈನಿಕಗಳಿಗೆ ಮಂಗಳೂರು ಸುದ್ದಿಗಾರರಾಗಿ, ನವಭಾರತ ಮತ್ತು ರಾಷ್ಟ್ರಬಂಧು ಸಾಪ್ತಾಹಿಕಕ್ಕೆ ನಗರ ಪ್ರತಿನಿಧಿಯಾಗಿಯೂ ದುಡಿದರು.

ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಾಗಿ, ಅದರ ತತ್ತ್ವ ಪ್ರಣಾಳಿಕೆಯಲ್ಲಿ ಆಸಕ್ತಿ ಹೆಚ್ಚಿ, ದಾಸ್ಯದ ವಿರುದ್ಧ ದೇಶ ಸಂಘಟಿತವಾಗಬೇಕು, ಶೋಷಣೆಯ ವಿರುದ್ಧ ಹೋರಾಡಬೇಕು, ಬಡತನ, ದೀನತೆಗಳು ಹೋಗಿ ಸರ್ವರೂ ಸಮ ಸುಖಿಗಳಾಗಬೇಕು ಎಂದು ಬಯಸಿದರು.

ಕುಳಕುಂದ ಶಿವರಾಯರ ಸಂಪಾದಕತ್ವದಲ್ಲಿ ಹುಬ್ಬಳ್ಳಿಯಲ್ಲಿ ಕಮ್ಯೂನಿಸ್ಟ್‌ ವಾರಪತ್ರಿಕೆ ‘ಜನಶಕ್ತಿ’ಯನ್ನೂ ಪ್ರಾರಂಭಿಸಿದರಾದರೂ ಸೈದ್ಧಾಂತಿಕವಾಗಿ ಭ್ರಮನಿರಸನಹೊಂದಿ, ಕಮ್ಯುನಿಸ್ಟ್‌ ಪಕ್ಷವನ್ನು ತ್ಯಜಿಸಿದರು. ಪಕ್ಷದಿಂದ ಹೊರಬಂದ ನಂತರ ಹೊಸ ಹೊಟ್ಟು, ಹೊಸ ಹೆಸರಿನಿಂದಲೇ ಬರೆಯಬೇಕೆನಿಸಿ ‘ನಿರಂಜನ’ ಎಂಬ ಹೆಸರಿನಿಂದ (೧೯೫೧) ಬರೆಯತೊಡಗಿದರು.

ನಂತರ ಬೆಂಗಳೂರಿನ ಪ್ರಜಾಮತ ಸಹ ಸಂಪಾದಕರಾಗಿ ಸೇರ್ಪಡೆಯಾದರು. ೧೯೪೬ ರಲ್ಲಿ ಅಯ್ಯನೈ ಕಥಾಸಂಕಲನವು ‘ಸಂಧಿಕಾಲ’ ಎಂಬ ಹೊಸ ಆವೃತ್ತಿಯಾಗಿ ಪ್ರಕಟವಾದ ನಂತರ ೧೯೪೭ ರಲ್ಲಿ ‘ರಕ್ತಸರೋವರ’, ೧೯೫೨ ರಲ್ಲಿ ‘ಅನ್ನಪೂರ್ಣ’ ಕಥಾಸಂಕಲನಗಳು ಪ್ರಕಟಗೊಂಡವು.

ಪತ್ರಿಕೋದ್ಯಮ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ನಿರಂಜನರು ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯತೊಡಗಿದರು. ಬೆಂಗಳೂರಿನ ಪ್ರಜಾಮತ ವಾರಪತ್ರಿಕೆಯಲ್ಲಿ ಸರೂ ಕೇಳಿದೆಯಾ? (೧೯೪೫), ಉಷಾ ಪತ್ರಿಕೆಯಲ್ಲಿ ಸರೋಜ ಸಂಚಯ (೧೯೪೬), ಸಾಧನ ಸಂಚಯ (೧೯೫೧), [ಈ ಸಾಧನ ಸಂಚಯ ಅಂಕಣವು ಜನಪ್ರಗತಿಯಲ್ಲಿ ಮುಂದುವರೆಯಿತು] ಚಿತ್ರಗುಪ್ತ ಪತ್ರಿಕೆಯಲ್ಲಿ ಓದುಗರೊಡನೆ ಐದುನಿಮಿಷ (೧೯೫೨), ಹುಬ್ಬಳ್ಳಿಯ ಜನಶಕ್ತಿ ಪತ್ರಿಕೆಯಲ್ಲಿ ಸಂಗಾತಿಯ ಸಂಚಯ (೧೯೪೭), ದಾವಣಗೆರೆಯ ನವಶಕ್ತಿ ವಾರಪತ್ರಿಕೆಯಲ್ಲಿ ಬಿಸಿಲು ಬೆಳದಿಂಗಳು (೧೯೫೨) ಮುಂಬಯಿಯ ‘ಚೇತನ’ ಪತ್ರಿಕೆಯ ಮಾಸಿಕ ಅಂಕಣ (೧೯೫೨), ಹೈದರಾಬಾದಿನ ಸಾಧನ ವಾರಪತ್ರಿಕೆಯಲ್ಲಿ ಮಧುಸಂಚಯ (೧೯೫೬) ಮತ್ತು ಬೆಂಗಳೂರಿನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗಾಗಿ ‘ಬೇವು ಬೆಲ್ಲ’ (೧೯೬೨) ಇವು ವಿವಿಧ ಪತ್ರಿಕೆಗಳಲ್ಲಿ ನಿರ್ವಹಿಸಿದ ಅಂಕಣ ಬರಹಗಳು.

ಸಾಧನ ಸಂಚಯ ಅಂಕಣ ಬರಹಕ್ಕೆ ಮಾರುಹೋದ ಮತ್ತು ಉಷಾಪತ್ರಿಕೆಗೆ ಸಣ್ಣ ಪುಟ್ಟ ಕತೆಗಳನ್ನು ಆಗಾಗ್ಗೆ ಬರೆಯುತ್ತಿದ್ದ ವೆಂಕಟಲಕ್ಷ್ಮೀ (ಅನುಪಮಾ) ಯವರಿಗೆ ನಿರಂಜನರ ಪರಿಚಯವಾಗಿ, ಇವರೂ ನಿರಂಜನರ ವ್ಯಕ್ತಿತ್ವಕ್ಕೆ ಮಾರುಹೋದಾಗ ನಿಂಜನರು ಅನುಪಮರವನ್ನೂ ಮದುವೆಯಾದರು.

ವಿಮೋಚನೆ ಕಾದಂಬರಿಯನ್ನೂ ಬರೆದ ನಂತರ ಬನಶಂಕರಿ, ಸೌಭಾಗ್ಯ, ಅಭಯ, ರಂಗಮ್ಮನ ವಠಾರ ಮುಂತಾದ ಕಾದಂಬರಿಗಳನ್ನು ಬರೆದರು. ಹಲವಾರು ಕಾದಂಬರಿಗಳು ಮರುಮುದ್ರಣವಾದುದಲ್ಲದೆ ತೆಲುಗು, ಮಲಯಾಳಂ, ಭಾಷೆಗೂ ಅನುವಾದಗೊಂಡವು. ಚಿರಸ್ಮರಣೆ (೧೯೫೫) ಮತ್ತು ಮೃತ್ಯುಂಜಯ (೧೯೭೬) ಕಾದಂಬರಿಗಳು ಮಲಯಾಳಂ, ತೆಲುಗು, ತಮಿಳು, ಮರಾಠಿ, ಬಂಗಾಳಿ, ತುಳು, ಇಂಗ್ಲಿಷ್‌ ಭಾಷೆಗೂ ಭಾಷಾಂತರಗೊಂಡಿವೆ. ಇವರು ಅನುವಾದಿಸಿದ ಕಾದಂಬರಿಗಳು ತಾಯಿ (ಮಾಕ್ಸಿಂಗಾರ್ಕಿ ಕಾದಂಬರಿ) ‘ಮದುವಣಗಿತ್ತಿ, ಮಾನವನ ಪಾಡು, ಅಧಃಪತನ, ಚೀನಾದೇಶದ ನೀತಿ ಕಥೆಗಳು ಮುಂತಾದವುಗಳು.

ಸಾಹಿತ್ಯಾಸಕ್ತಿಯಿಂದ ತಮ್ಮ ಹರೆಯದ ವಯಸ್ಸಿನಿಂದಲೇ ಕಾಸರಗೋಡು ಸಮ್ಮೇಳನ (ಅಧ್ಯಕ್ಷರು-ತಿ.ತಾ.ಶರ್ಮ), ಮುಂಬಯಿಯ ಸಾಹಿತ್ಯ ಸಮ್ಮೇಳನ (ಅಧ್ಯಕ್ಷರು-ಗೋವಿಂದಪೈ), ಬೇಲೂರು ಸಾಹಿತ್ಯ ಸಮ್ಮೇಳನ (ಎಸ್‌.ಸಿ. ನಂದೀಮಠ), ಮೈಸೂರಿನಲ್ಲಿ ನಡೆದ ಸಮ್ಮೇಳನ (ಶಿವರಾಮ ಕಾರಂತರು) ಮುಂತಾದವುಗಳಲ್ಲಿ ಪ್ರತ್ಯಕ್ಷದರ್ಶಿಯಾಗಿ ಹಾಜರಾಗಿದ್ದರಲ್ಲದೆ ರಾಯಚೂರು ಸಮ್ಮೇಳನ (೧೯೫೫-ಆದ್ಯರಂಗಾಚಾರ್ಯ)ದಲ್ಲಿ ಲೇಖಕರ ಗೋಷ್ಠಿಯ ಅಧ್ಯಕ್ಷರಾಗಿಯೂ ಪಾಲ್ಗೊಂಡರು.

ಬೆಂಗಳೂರಿಗೆ ವಾಸ್ತವ್ಯವನ್ನು ಬದಲಿಸಿದಾಗ ಜಿ.ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿದ್ದಾಗ ಇವರು ಕಾರ್ಯದರ್ಶಿಯಾಗಿ ನಿಯೋಜಿತರಾಗಿ (೧೯೬೪) ಕೆಲ ತಿಂಗಳು ಕಾರ್ಯ ನಿರ್ವಹಿಸಿದರು. ಪರಿಷತ್ತಿನ ಈ ಕಾರ್ಯಗೌರವದಿಂದ ನಿರ್ಗಮಿಸಿದ ನಂತರ ಇಂಡಿಯನ್‌ ನ್ಯೂಸ್‌ ಅಂಡ್‌ ಫೀಚರ್ ಅಲಯನ್ಸ್‌ (ದೆಹಲಿಯ ಇನ್ಫಾ) ಸಂಸ್ಥೆಗೆ ಕಾರ್ಯನಿರತ ಪತ್ರಿಕೋದ್ಯಮಿಯಾಗಿ ‘ರಾಜಧಾನಿಯಿಂದ’, ಮತ್ತು ದಿನಚರಿಯಿಂದ ಎಂಬ ಎರಡು ಅಂಕಣಗಳನ್ನು ನಿರ್ವಹಿಸಿದರು.

ಸುಮಾರು ೨೫ ಕಾದಂಬರಿಗಳು; ೧೨ ಕಥಾ ಸಂಕಲನಗಳು; ಆರು ನಾಟಕಗಳು, ಜೀವನ ವೃತ್ತ, ವ್ಯಕ್ತಿಚಿತ್ರ ಸಂಗ್ರಹ; ಲೇಖನಗಳ ಸಂಗ್ರಹದ ೮ ಪುಸ್ತಕಗಳು; ಅಂಕಣ ಬರಹಗಳ ೮ ಕೃತಿಗಳು; ರಾಜಕೀಯ ಭಾಷಾಂತರದ ಸುಮಾರು ೧೫ ಕೃತಿಗಳಲ್ಲದೆ ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಮಹತ್ವದ ಕೃತಿಗಳೆಂದರೆ ಕರ್ನಾಟಕ ಸಹಕಾರಿ ಪ್ರಕಾಶನದಿಂದ ೭ ಸಂಪುಟಗಳಲ್ಲಿ ಪ್ರಕಟವಾದ ‘ಜ್ಞಾನ ಗಂಗೋತ್ರಿ’ ಮತ್ತು ೨೫ ಸಂಪುಟಗಳಲ್ಲಿ ಪ್ರಕಟಗೊಂಡ ಜಗತ್ತಿನ ಶ್ರೇಷ್ಠ ಸಣ್ಣ ಕಥೆಗಳ ‘ ವಿಶ್ವಕಥಾ ಕೋಶ’ ಕನ್ನಡ ಸಾಹಿತ್ಯಕ್ಕೆ ವಿಶಿಷ್ಠ ಕೊಡುಗೆ. ಇದಲ್ಲದೆ ಜನತಾ ಸಾಹಿತ್ಯ ಪ್ರಕಾಶನದಿಂದ ೨೫ ಪುಸ್ತಕಗಳು, ಪುರೋಗಾಮಿ ಪ್ರಕಾಶನದಿಂದ ೮ ಕೃತಿಗಳು ಪ್ರಕಟಗೊಂಡಿವೆ.

ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್‌ ಲ್ಯಾಂಡ್‌ ನೆಹರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಹಾಗೂ ಗೌರವ ಸಂಪುಟವಾಗಿ ಮುದ್ರಿಸಿದ ‘ಪ್ರತಿಧ್ವನಿ’ ಗ್ರಂಥ, ಪುತ್ತೂರಿನ ಕರ್ನಾಟಕ ಸಂಘದಿಂದ ೧೯೮೬ ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ನಿರಂಜನ ಅಭಿನಂದನ’.

ಹೀಗೆ ಸಾಹಿತ್ಯ, ಪತ್ರಿಕೋದ್ಯಮಗಳಿಗೆ ವಿಶಿಷ್ಠಕೊಡುಗೆ ನೀಡಿದ ನಿರಂಜನರು ಪಾರ್ಶ್ವವಾಯು ಪೀಡಿತರಾದರೂ ವಿಶ್ವಕಥಾಕೋಶದ ಯೋಜನೆಯನ್ನೂ ಪೂರ್ಣಗೊಳಿಸಿ ಕರ್ನಾಟಕ ಸಹಕಾರಿ ಪ್ರಕಾಶನಕ್ಕೆ ವಿದಾಯ ಹೇಳಿದರು. ಆದರೆ ಈ ಹಿಂದೆಯೇ ಅನುಪಮಾ ನಿಂಜನರವರನ್ನು ಕಾಡುತ್ತಿದ್ದ ಕ್ಯಾನ್ಸರ್ ಖಾಯಿಲೆಯು ಇವರನ್ನೂ ಧೃತಿಗೆಡಿಸಿತ್ತು. ಅನುಪಮಾರವರ ನಿಧನದ ನಂತರ (೧೫.೨.೯೧) ನಿರಂಜನರೂ ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೧೯೯೨ ರ ಮಾರ್ಚ್ ೧೩ರಂದು.
ಮಲ್ಲಿಕಾ ಕಡಿದಾಳ್‌ ಮಂಜಪ್ಪ
೧೫.೬.೧೯೨೦

‘ಶ್ರೀವಿವೇಕಾನಂದವಿಜಯಂ’ ಎಂಬ ಮಹಾಕಾವ್ಯ ರಚಿಸಿ, ಲೇಖಕಿಯರಲ್ಲಿ ಪ್ರಪ್ರಥಮರಾಗಿ ಮಹಾಕಾವ್ಯ ರಚಿಸಿದ ಖ್ಯಾತಿಗೆ ಪಾತ್ರರಾಗಿರುವ ಮಲ್ಲಿಕಾ ಕಡಿದಾಳ್‌ ಮಂಜಪ್ಪನವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕನಾಲೆ ಹಳ್ಳಿಯ ‘ಬಾಗಮನೆ’ ಮನೆತನದಲ್ಲಿ ೧೯೨೦ರ ಜೂನ್‌ ೧೫ರಂದು. ತಂದೆ ಚನ್ನೇಗೌಡ ಬಾಗಮನೆ, ತಾಯಿ ಪಾರ್ವತಮ್ಮನವರ ಎಂಟು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳಲ್ಲಿ ನಾಲ್ಕನೆಯವರು.

ಅತ್ತಿಗೊಂಡ ಎಸ್ಟೇಟಿನ ಅರಮನೆಯಂತಹ ಮನೆಯಲ್ಲಿ ರಾಜಕುಮಾರಿಯಂತೆ ಬೆಳೆದ ಲಕ್ಷ್ಮೀದೇವಿ (ಮಲ್ಲಿಕಾರವರು) ಯವರಿಗೆ ಅಗಾಧವಾದ ಪ್ರಕೃತಿ ಸೌಂದರ್ಯದ ನಡುವೆ, ಕಾಡುಮೇಡು, ಬೆಟ್ಟಗುಡ್ಡ, ಇಳಿಜಾರು ಕಣಿವೆಗಳು, ಹಚ್ಚ ಹಸಿರಿನ ಕಾಫಿ ತೋಟದಲ್ಲಿ ಸದಾ ಆಟ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅಷ್ಟಾಗಿ ಗಮನ ಕೊಡದಿದ್ದುದರಿಂದ ವ್ಯವಸ್ಥಿತವಾದ ಶಾಲಾ ಶಿಕ್ಷಣಕ್ಕೆ ಧಕ್ಕೆ. ಓದಿನ ಬಗ್ಗೆ ಆಸೆಯಿರದ ಲಕ್ಷ್ಮೀದೇವಿಗೆ ತಾನು ಓದುಬರಹ ಕಲಿಯಬೇಕೆನಿಸತೊಡಗಿದಾಗ ಮನೆಯಲ್ಲಿಯೇ ಅಕ್ಷರಾಭ್ಯಾಸ.

ಎಸ್ಟೇಟಿನಲ್ಲಿ ದುಡಿಯುತ್ತಿದ್ದವರೆಲ್ಲರೂ ಅನಕ್ಷರಸ್ಥರೆ. ಅಂಥವರ ಮಧ್ಯೆ ಅಕ್ಷರಸ್ಥ ಮೇಸ್ತ್ರಿಯೊಬ್ಬರು ಬಂದು, ಮಕ್ಕಳಿಗೆ ಪ್ರೈಮರಿಶಾಲೆಯಲ್ಲಿ ಕಲಿಸುವುದನ್ನೆಲ್ಲಾ ಕಲಿಸತೊಡಗಿದರು.

ಸರಿಯಾದ ರಸ್ತೆಗಳೇ ಇರದಿದ್ದ ಕಾಲದಲ್ಲಿ ಚಿಕ್ಕಮಗಳೂರಿಗೆ ಬೆಂಗಳೂರು ಬಹುದೂರ. ಚನ್ನೇಗೌಡರು ಬ್ರಿಗೇಡ್‌ ರಸ್ತೆಯಲ್ಲಿದ್ದ ಮೂರ್ನಾಲ್ಕು ಎಕರೆ ವಿಸ್ತೀರ್ಣದ ಮೋಟಾರು ರಿಪೇರಿ, ಮಾರಾಟದ ಕಂಪನಿಯನ್ನು ಖರೀದಿಸಿ ಇಡೀ ಸಂಸಾರ ಬೆಂಗಳೂರಿಗೆ ಬಂದು, ಹುಡುಗರನ್ನೂ ಸೇಂಟ್‌ ಜೋಸೆಫ್‌ ಶಾಲೆಗೆ ಸೇರಿಸಿದರು. ಆಗ ಮಲ್ಲಿಕಾರವರಿಗೆ ೯ ವರ್ಷ. ಶಾಲೆಯಲ್ಲಿ ಕನ್ನಡ ಪಠ್ಯವಿಲ್ಲದಿದ್ದುದರಿಂದ ಮನೆಯಲ್ಲಿ ಪ್ರಾರಂಭಿಸಿದ ಕನ್ನಡದ ಪಾಠ. ಹುಡುಗರ ಜೊತೆ ಉಳಿದ ಹುಡುಗಿಯರಿಗೂ ಸುಂದರಯ್ಯ ಮಾಸ್ತರಿಂದ ಕನ್ನಡ ಕಲಿಕೆ. ಹೀಗೆ ಮಲ್ಲಿಕಾರವರು ಓದಿದ್ದು ಏಳನೆಯ ತರಗತಿಯವರೆಗೆ. ಸ್ವಯಂ ಶಿಕ್ಷಣಾರ್ಥಿಯಾಗಿ ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಪಡೆದ ಪರಿಣತಿ.

ಇವರ ಜೊತೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳೂ ಕರಕುಶಲ ಕಲೆಯಲ್ಲಿ ಪ್ರಖ್ಯಾತರೆ. ಮನೆಯಲ್ಲಿ ಕುಳಿತಿದ್ದರೂ ಟೈಲರಿಂಗ್‌, ಕಸೂತಿ, ಸ್ವೆಟರ್ ಹೆಣಿಕೆ, ಎಂಬ್ರಾಯಿಡರಿ, ಬಳೆಯಲ್ಲಿ ಬುಟ್ಟಿ ತಯಾರಿಕೆ, ಕೈಚೀಲಗಳು, ದಿಂಬಿನ ಚೀಲಗಳಿಗೆ ದಾರದ ಕಸೂತಿ ಕೆಲಸ ಮುಂತಾದವುಗಳಲ್ಲಿ ಕುಶಲತೆ ಉಳ್ಳವರು.

ವಿಶಾಲವಾದ ಸ್ಥಳದ ಮಧ್ಯೆ ಬಂಗಲೆಯಿದ್ದು ಕಾರು ಗ್ಯಾರೇಜ್‌ ಕೂಡಾ ಪಕ್ಕದಲ್ಲೇ ಇದ್ದು ರಿಪೇರಿಗಾಗಿ ಲೇತುಗಳ ವಿಭಾಗ, ಮರಗೆಲಸ, ಪೇಯಿಂಟಿಂಗ್‌ ವಿಭಾಗ, ಬ್ಯಾಟರಿ ವಿಭಾಗ ಹೀಗೆ ಎಲ್ಲದರಲ್ಲೂ ಹಲವಾರು ಜನ ಕೆಲಸಗಾರರು ಹಗಲಿರುಳು ದುಡಿಯುತ್ತಿದ್ದು, ಸದಾ ಒತ್ತಡದ ಸ್ಥಿತಿಯಲ್ಲೇ ಕೆಲಸ ನಡೆಯುತ್ತಿದ್ದ ಗ್ಯಾರೇಜ್‌ಗೆ ಎರಡನೆಯ ಮಹಾಯುದ್ಧದ ಬಿಸಿತಟ್ಟಿ, ಬಿಡಿಭಾಗಗಳನ್ನು ಆಮದುಮಾಡಿಕೊಳ್ಳುವಲ್ಲಿ ತೊಂದರೆ ಉಂಟಾಗಿ ಕಡೆಗೆ ಗ್ಯಾರೇಜನ್ನೂ ಮುಚ್ಚುವ ಸ್ಥಿತಿ ಬಂದು ಇಡೀ ಸಂಸಾರ ಹಿಂದಿರುಗಿದ್ದು ಅತ್ತಿಗೊಂಡ ಎಸ್ಟೇಟಿಗೆ. ಅಷ್ಟರಲ್ಲಾಗಲೇ ದಾಯಾದಿಗಳು ತೋಟದ ಕೆಲ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದು, ಉಳಿದದ್ದಷ್ಟೇ ಇವರ ಪಾಲಿಗೆ ಬಂದುದು.

ತಾಯಿಗೆ ಪುರಾಣ ಪುಣ್ಯ ಕಥೆಗಳಲ್ಲಿ ಆಸಕ್ತಿಯಿದ್ದು ಹೆಣ್ಣುಮಕ್ಕಳಿಂದ ಓದಿಸಿ ಕೇಳುತ್ತಿದ್ದ ರಾಮಾಯಣ, ಮಹಾಭಾರತ, ಭಾಗವತ ಕಥೆಗಳನ್ನು ಇವರೂ ಕೇಳತೊಡಗಿದರು. ಜೊತೆಗೆ ಬೆಂಗಳೂರಿನಲ್ಲಿದ್ದಾಗ ಮನೆಕೆಲಸದವಳು ಹೇಳುತ್ತಿದ್ದ ರಂಜನೀಯವಾದ ಕಥೆಗಳಿಗೂ ಮಾರು ಹೋಗಿದ್ದರು. ಅತ್ತಿಗೊಂಡ ಎಸ್ಟೇಟಿಗೆ ಹಿಂದಿರುಗಿ ಬಂದನಂತರ ಕೆಲಸದವರು ಹೇಳುತ್ತಿದ್ದ ಜನಪದಕಥೆಗಳು, ಹಾಡುಗಳನ್ನು ಕೇಳಿ ಪ್ರಭಾವಿತರಾದರು. ಆಲೋಚನಾಶಕ್ತಿ, ವಿಚಾರಶಕ್ತಿ ಬೆಳೆಯುತ್ತಾ ಬಂದಂತೆಲ್ಲ ಸಾಹಿತ್ಯದ ಕಡೆ ಅಭಿರುಚಿ ಬೆಳೆಯತೊಡಗಿ ತಾವೂ ಏಕೆ ಬರೆಯ ಬಾರದು ಎನಿಸಿದಾಗ ಬರೆದ ಮೊದಲ ಕತೆ ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಇವರಿಗಾದ ಆನಂದ ಅಷ್ಟಿಷ್ಟಲ್ಲ. ಸರಸ್ವತಿಯ ಕೃಪೆ ಒಲಿದು ಬಂದಿದೆ ಎಂದು ತಿಳಿದು ಬರೆದದ್ದನ್ನೆಲ್ಲಾ ಇತರ ಪತ್ರಿಕೆಗಳಿಗೂ ಕಳುಹಿಸತೊಡಗಿದರು. ಕೆಲ ಪದ್ಯಗಳೂ ಪ್ರಕಟಗೊಂಡವು.

ಈಗ ಮನಸ್ಸಿನಲ್ಲಿ ಸಂಪೂರ್ಣವಾಗಿ ಸಾಹಿತ್ಯವೇ ತುಂಬಿಕೊಂಡು ನಿಂತರೆ ಕುಳಿತರೆ, ಎಸ್ಟೇಟಿನಲ್ಲಿ ಓಡಾಡುತ್ತಿದ್ದರೆ ಸಾಹಿತ್ಯದ ಆಲೋಚನೆಯೆ. ಆದರೆ ತಾಯಿಗೆ ಮಗಳ ಮದುವೆಯ ಯೋಚನೆ. ಕಡಿದಾಳ್‌ ಮಂಜಪ್ಪನವರೊಡನೆ ಮದುವೆ ನಡೆದು ಗಂಡನ ಮನೆ ತಲುಪಿದರು. ಅಲ್ಲೋಬಿಡುವಿಲ್ಲದ ಕೆಲಸ ರಾಜಕೀಯ ವ್ಯಕ್ತಿಯಾದ್ದರಿಂದ ಸದಾ ರಾಜಕೀಯ ಗೆಳೆಯರ, ವಾರಾನ್ನದ ವಿದ್ಯಾರ್ಥಿಗಳ, ಇಲ್ಲೇ ವಸತಿ ಹೂಡಿರುವ ವಿದ್ಯಾರ್ಥಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಳ್ಳಿಯಿಂದ ಬಂದವರ, ಬಂಧುಗಳಿಂದ ಮನೆಯಲ್ಲಿ ಸದಾ ಗಜಿಬಿಜಿ.

ಅರ್ಧ ಆಯುಸ್ಸು ಹೀಗೇ ಕಳೆದು ಹೋದರೂ ಬತ್ತದ ಸಾಹಿತ್ಯದ ಸೆಲೆ ಚಿಗುರೊಡೆದಿದ್ದು ನಲವತ್ತರ ನಂತರವೇ. ಎಂ.ಕೆ. ಇಂದಿರಾರವರಂತೆ ಮಧ್ಯ ವಯಸ್ಸು ದಾಟಿನ ನಂತರವೇ ಬರೆದ ಮೊದಲ ಕಾದಮಬರಿ ‘ಜೀವನ ಗಂಗಾ’. ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ಬಂದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಆಶಯದಿಂದ ಬೆಳಗಿನ ಜಾವಕ್ಕೆ ಎದ್ದು ವ್ರತದಂಥೆ, ಸಾಂಸಾರಿಕ ಜಂಜಡಗಳ ನಡುವೆಯೂ ಹಗಲು-ರಾತ್ರಿ ಬರೆಯತೊಡಗಿದರು. ಹೀಗೆ ಸಾಹಿತ್ಯ ಯಾತ್ರೆಯನ್ನು ಸಾಹಸಯಾತ್ರೆಯಾಗಿ ಸ್ವೀಕರಿಸಿ ಬರೆದ ಕಾದಂಬರಿಗಳು ಡಾ. ಅಘೋರ, ಡಾ. ಕಮಲೇಶ್‌, ವಂದೇಮಾತರಂ (ರಾಜಕೀಯ ವಸ್ತುವಾಗುಳ್ಳ ಕಾದಂಬರಿ), ಅನಂತಾನಂತದೆಡೆಗೆ, ಮನೋನ್ಮಣಿ, ಮುಂತಾದ ಹನ್ನೊಂದು ಕಾದಂಬರಿಗಳು-

ಬಹುರತ್ನಾ ವಸುಂಧರಾ, ರತ್ನಗರ್ಭವಸುಂಧರಾ, ಸುಧಾಮಣಿ, ರಮಣೀಮಣಿ, ಲಿಯೋನ, ಶ್ರೀಮುಖ ಮೊದಲಾದ ಹನ್ನೊಂದು ಕಥಾಸಂಕಲನಗಳು-
ಪೂಜಾವಸಾನ ಸಮಯೆ!, ಧ್ಯಾನಾವಸಾನಸಮಯೋ!, ಗಗನಕುಸುಮ, ಜೀವನಕುಸುಮ ಮೊದಲಾದ ೧೫ ಕವಿತಾ ಸಂಕಲನಗಳು-

ಮಂಗಳಭಾರತ, ಕಲ್ಯಾಣಭಾರತಿ, ಉತ್ತರೋತ್ತರಣ’, ರಾಗಾನುರಾಗಿಣಿ, ಪ್ರಪುಲ್ಲಭಾರತ ಮೊದಲಾದ ೫ ಸಂಜೀವನ ಕಾವ್ಯಗಳು-

ಪುಣ್ಯಾಭಿಸಾರ, ಪುಣ್ಯ ಪಯೋನಿಧಿ ಮೊದಲಾದ ಎರಡು ಪೌರಾಣಿಕ ನಾಟಕಗಳು;

ತರಂಗಿಣಿ-ಸಾನೆಟ್‌ಗಳು; ಐಂದ್ರಕೀರ್ತಿ ಕೇತನಂ ಎಂಬ ಗದ್ಯ ಕಾವ್ಯವಲ್ಲದೆ ಶಿಶುಸಾಹಿತ್ಯಕ್ಕೂ ಇವರ ಕೊಡುಗೆ ದೊಡ್ಡದೆ.

ದೂರದೇಶದಲ್ಲಿ, ಬೆಳದಿಂಗಳ ರಾತ್ರಿ, ರಂಗಸಾಹಸ, ಓಹಿಯೋಜ ಸರೋವರ ಮೊದಲಾದ ೭ ಶಿಶು ಸಾಹಿತ್ಯ ಕೃತಿಗಳಲ್ಲದೆ ಇವರು ರಚಿಸಿದ ಮಹಾಕಾವ್ಯ ‘ಶ್ರೀ ವಿವೇಕಾನಂದ ವಿಜಯಂ’. ಹೀಗೆ ಲೇಖಕಿಯರಲ್ಲಿ ಮಹಾಕಾವ್ಯ ರಚಿಸಿದವರಲ್ಲಿ ಮೊದಲನೆಯವರು ಜಯದೇವಿ ತಾಯಿ ಲಿಗಾಡೆ ಎರಡನೆಯವರು.

ತಮ್ಮ ೭೩ ರ ಹರೆಯದಲ್ಲಿ ತಪಸ್ಸಿನಂತೆ ಕುಳಿತು ರಚಿಸಿದ ಕೃತಿ ಯಲ್ಲಿ ೪೨ ಆಶ್ವಾಸಗಳ ೨೭೩೨೦ ಸಾಲುಗಳ, ೧೨೭೫ ಪುಟಗಳ ಮಹಾಕಾವ್ಯವನ್ನು ರಚಿಸಲು ಐದು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಇದು ಪ್ರಕಟವಾದುದು ೧೯೯೮ ರಲ್ಲಿ ಹೀಗೆ ಇವರು ರಚಿಸಿದ ಒಟ್ಟು ಸಾಹಿತ್ಯ ಕೃತಿಗಳ ಸಂಖ್ಯೆ ೫೫. ಲಕ್ಷ್ಮೀ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನೂ ಹುಟ್ಟುಹಾಕಿ ಪ್ರಕಟಣಾ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿದ ಲೇಖಕಿ.

ಮುಖ್ಯಮಂತ್ರಿಗಳ ಮಡದಿಯಾಗಿ ಸಾಂಸಾರಿಕ ಜೀವನದಲ್ಲಿ ಕಳೆದುಹೋಗಿ ಬಿಡಬಹುದಾಗಿದ್ದ ಮಲ್ಲಿಕಾರವರಲ್ಲಿ ಸಾಹಿತ್ಯದ ಸೆಲೆ ಚಿಗುರೊಡೆದು ಮಧ್ಯವಯಸ್ಸು ದಾಟಿದ ನಂತರ ಸಾಹಿತ್ಯ ಸೇವೆಯನ್ನು ಕೈಗೊಂಡು ಅಗಾಧ ಸಾಧನೆಮಾಡಿದ ಮಲ್ಲಿಕಾರವರಿಗೆ ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆಪ್ರಶಸ್ತಿ (೧೯೯೯), ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜದೇವಿ ಪ್ರಶಸ್ತಿ (೧೯೯೯), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭) ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.